ಬಳ್ಳಾರಿ, ಫೆ.11: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಹಾಗೂ ಇವರಿಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಆಪ್ತರ ಮನೆಗಳ ಮೇಲೆ ಈಡಿ ದಾಳಿ ಮಾಡಿರುವುದು ದುರುದ್ಧೇಶಪೂರಿತ ಎಂದು ಮಾಜಿ ಉಪಮೇಯರ್, ಕಾಂಗ್ರೆಸ್ ಮುಖಂಡ ಬೆಣಕಲ್ ಬಸವರಾಜಗೌಡ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಬೆಳಿಗ್ಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರ ಕಚೇರಿ, ಮನೆ ಹಾಗೂ ಆಪ್ತರ ನಿವಾಸಗಳ ಮೇಲೆ ಈಡಿ ನಡೆಸಿದ ದಾಳಿಯ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಆಶಯಗಳನ್ನು ಗಾಳಿಗೆ ತೂರಿ ಸರ್ವಾಧೀಕಾರಿ ಧೋರಣೆಯನ್ನು ತಾಳುತ್ತ, ವಿರೋಧ ಪಕ್ಷಗಳ ಮುಖಂಡರನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡುತ್ತಿದೆ. ಚುನಾವಣೆಯ ಸಂದರ್ಭದಲ್ಲೇ ತನಿಖಾ ಸಂಸ್ಥೆಗಳು ಚುರುಕಾಗುವುದರ ಹಿಂದೆ ಬಿಜೆಪಿಯ ನಾಯಕರ ಪಾತ್ರ ಇರುವುದು ಗುಟ್ಟಾಗಿ ಉಳಿದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರ ಕಚೇರಿ, ನಿವಾಸಗಳ ಮೇಲೆ ಈಡಿ ದಾಳಿ ಆಗಿರುವುದು ಕೂಡ ನಮ್ಮ ನಾಯಕರನ್ನು ಬೆದರಿಸುವ ತಂತ್ರವಾಗಿದೆ. ಆದರೆ ನಾವು, ನಮ್ಮ ನಾಯಕರುಗಳು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದುರವುದಿಲ್ಲ ಎಂದು ಬೆಣಕಲ್ ಬಸವರಾಜಗೌಡ ಅವರು ತಿಳಿಸಿದ್ದಾರೆ.