ಬೆಂಗಳೂರು, ಜೂ.22 : ಲೋಕಸಭಾ ಚುನಾವಣೆ ಮುಗಿದ ಬೆನಲ್ಲೇ ರಾಜ್ಯದಲ್ಲಿ ಬೈಎಲೆಕ್ಷನ್ ಹವಾ ಜೋರಾಗಿದೆ.. ರಾಜ್ಯದ 3 ವಿಧಾನಸಭೆ, ಒಂದು ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ಬೈ ಎಲೆಕ್ಷನ್ ನಡೆಯಲಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ.
ವಿಧಾನಸಭೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳು ತೆರವಾಗಿದ್ರೆ, ಪರಿಷತ್ನಲ್ಲಿ ಉಡುಪಿ-ಮಂಗಳೂರಿನ ಜನಪ್ರತಿನಿಧಿಗಳು ಮತ ಚಲಾಯಿಸಿ ಆಯ್ಕೆ ಮಾಡುವ ಒಂದು ಸ್ಥಾನ ತೆರವಾಗಿದೆ.. ಈ 4 ಬೈ ಎಲೆಕ್ಷನ್ನಲ್ಲಿ ಟಿಕೆಟ್ ಪಡೆಯೋಕೆ ಬಿಜೆಪಿ ಘಟಾನುಘಟಿಗಳೇ ಲಾಬಿ ಮಾಡೋಕೆ ಶುರು ಮಾಡಿದ್ದಾರೆ.
ಚನ್ನಪಟ್ಟಣ ಟಿಕೆಟ್ಗೆ ಸಿ.ಪಿ ಯೋಗೇಶ್ವರ್ ಲಾಬಿ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ತೆರವಾಗಿರೋ ಚನ್ನಪಟ್ಟಣ ಕ್ಷೇತ್ರಕ್ಕೆ.. ಬಿಜೆಪಿ ಹಾಗೂ ಜೆಡಿಎಸ್ ಪಾಳಯದಲ್ಲಿ ಆಕಾಂಕ್ಷಿಗಳು ಹೆಚ್ಚಾಗ್ತಿದ್ದಾರೆ.. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿ ಸೋತಿದ್ದ ಸಿ.ಪಿ ಯೋಗೇಶ್ವರ್ ಈ ಬಾರಿ ಆಕಾಂಕ್ಷಿಯಾಗಿದ್ದು, ಶತಾಯಗತಾಯ ಸ್ಪರ್ಧೆ ಮಾಡಲೇಬೇಕೆಂದು ಹಠಕ್ಕೆ ಬಿದ್ದಂತಿದೆ.. ಆದ್ರೆ ಪ್ರಸ್ತುತ ಯೋಗೇಶ್ವರ್ ಹಾಲಿ ಪರಿಷತ್ ಸದಸ್ಯರಾಗಿದ್ದು, ಅವರ ಅವಧಿ ಇನ್ನೂ 4 ವರ್ಷವಿದೆ.. ಹೀಗಾಗಿ ಬಿಜೆಪಿ ಹೈಕಮಾಂಡ್ ಮತ್ತೆ ಟಿಕೆಟ್ ಕೊಡುತ್ತೋ? ಇಲ್ವೋ? ಎಂಬ ಟೆನ್ಷನ್ ಶುರುವಾಗಿದೆ.. ಈ ಮಧ್ಯೆ ಚನ್ನಪಟ್ಟಣ ಜೆಡಿಎಸ್ ಗೆದ್ದಿರುವ ಕ್ಷೇತ್ರವಾಗಿರೋದ್ರಿಂದ ಬಿಜೆಪಿಗೆ ಬಿಟ್ಟು ಕೊಡುವ ಬದಲು ನಿಖಿಲ್ ಕುಮಾರಸ್ವಾಮಿಯನ್ನ ಕಣಕ್ಕಿಳಿಸಲು ಎಚ್ಡಿಕೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಶಿಗ್ಗಾಂವಿ ಟಿಕೆಟ್ ಪುತ್ರನಿಗೆ ಕೇಳ್ತಾರಾ ಬೊಮ್ಮಾಯಿ?
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ, ತೆರವಾಗಿರೋ ಶಿಗ್ಗಾಂವಿ ಕ್ಷೇತ್ರಕ್ಕೆ ತಮ್ಮ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಕೇಳ್ತಾರೆ ಎನ್ನಲಾಗಿದೆ.. ಬಸವರಾಜ ಬೊಮ್ಮಾಯಿ ತಮಗೆ ಕೇಂದ್ರ ಸಚಿವ ಸ್ಥಾನ ಸಿಗುತ್ತೆ ಎಂಬ ಭರವಸೆಯಲ್ಲಿದ್ರು..ಆದ್ರೆ ಅದು ಹುಸಿಯಾಗಿದೆ.. ಹೀಗಾಗಿ ಶಿಗ್ಗಾಂವಿಗೆ ತಮ್ಮ ಪುತ್ರನಿಗೆ ಟಿಕೆಟ್ ನೀಡಿ ಎಂಬ ಬೇಡಿಕೆ ಇಡಬಹುದು ಎನ್ನಲಾಗ್ತಿದೆ.
ಸಂಡೂರಿನಿಂದ ಸ್ಪರ್ಧಿಸ್ತಾರಾ ಶ್ರೀರಾಮುಲು?
ತುಕಾರಂ ಸಂಸದರಾದ ಕಾರಣ ತೆರವಾಗಿರೋ ಸಂಡೂರು ಕ್ಷೇತ್ರಕ್ಕೆ ಮಾಜಿ ಸಚಿವ ಶ್ರೀರಾಮುಲು ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿ ಬರ್ತಿದೆ.. ಯಾಕೆಂದರೆ ಸಂಡೂರು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು, ಒಮ್ಮೆ ಕೂಡ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದಿದ್ದೆ ಇಲ್ಲ.. ಜೊತೆಗೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ.. ಹೀಗಾಗಿ ಶ್ರೀರಾಮುಲು ಅವರನ್ನೇ ಹೈಕಮಾಂಡ್ ಕಣಕ್ಕೆ ಇಳಿಸಬಹುದು ಎನ್ನಲಾಗ್ತಿದೆ.. ಆದ್ರೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಸತತ ಎರಡು ಸೋಲು ಕಂಡಿರೋ ಶ್ರೀರಾಮುಲು ಇದಕ್ಕೆ ಒಪ್ಪಿಕೊಳ್ತಾರಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ..
ಪರಿಷತ್ ಟಿಕೆಟ್ ಕಟೀಲ್ vs ಮಧ್ವರಾಜ್: ಕೋಟಾ ಶ್ರೀನಿವಾಸ್ ಪೂಜಾರಿ ಸಂಸದರಾದ ಕಾರಣ ತೆರವಾದ ಪರಿಷತ್ ಸ್ಥಾನಕ್ಕೆ ಕರಾವಳಿ ಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ.. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರಿಷತ್ ಟಿಕೆಟ್ನ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.. ಇತ್ತ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದರು ವಿರೋಧ ಮಾಡದೇ ಪಕ್ಷದ ಪರ ಕೆಲಸ ಮಾಡಿದ ಪ್ರಮೋದ್ ಮಧ್ವರಾಜ್, ಪರಿಷತ್ ಟಿಕೆಟ್ಗೆ ಮತ್ತೋರ್ವ ಆಕಾಂಕ್ಷಿಯಾಗಿದ್ದು.. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.