ಪಾಟ್ನಾ: ತಮ್ಮ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಬಿಹಾರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದ ಅವಧ್ ಬಿಹಾರಿ ಚೌಧರಿ ಅವರ ವಿರುದ್ಧ ಆಡಳಿತಾರೂಢ ಎನ್ಡಿಎ ಅವಿಶ್ವಾಸ ನಿರ್ಣಯ ಮಂಡಿಸಿ ಅಂಗೀಕರಿಸುವ ಮೂಲಕ ಸೋಮವಾರ ಪದಚ್ಯುತಿಗೊಳಿಸಿದೆ.
ಆರ್ಜೆಡಿಗೆ ಸೇರಿದ ಚೌಧರಿ ಅವರು ಹದಿನೈದು ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಮಹಾಘಟಬಂಧನ್’ ನೊಂದಿಗಿನ ಮೈತ್ರಿ ಮುರಿದು ಕೊಂಡು ಬಿಜೆಪಿ ಜೊತೆ ಹೊಸದಾಗಿ ಸರ್ಕಾರ ರಚಿಸಿದ್ದರು. ಚೌಧರಿ ಅವರು ತಮ್ಮ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು.
ಹೀಗಾಗಿ ಇಂದು ಬಿಜೆಪಿ ಶಾಸಕ ನಂದಕಿಶೋರ್ ಯಾದವ್ ಅವರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಸೇರಿದಂತೆ ಎನ್ಡಿಎಗೆ ಸೇರಿದ 128 ಶಾಸಕರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಮುನ್ನವೇ ಸ್ಪೀಕರ್ ಚೌಧರಿ ಅವರನ್ನು ಪದಚ್ಯುತಿಗೊಳಿಸಿದ್ದಾರೆ.
ಸದ್ಯದ ಬಲಾಬಲ ಪ್ರಕಾರ, 243 ಸದಸ್ಯರಿರುವ ಬಿಹಾರ ಅಸೆಂಬ್ಲಿಯಲ್ಲಿ 122ರ ಸರಳ ಬಹುಮತಕ್ಕಿಂತ ಹೆಚ್ಚು, ಅಂದರೆ 128 ಶಾಸಕರ ಬೆಂಬಲವನ್ನು ನಾವು ಹೊಂದಿದ್ದೇವೆ ಎಂದು ಎನ್ಡಿಎ ಹೇಳಿಕೊಂಡಿದೆ. ಬಿಜೆಪಿ 78, ಜೆಡಿಯು 45, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 4 ಮತ್ತು ಒಬ್ಬ ಸ್ವತಂತ್ರ ಶಾಸಕರನ್ನು ಹೊಂದಿದೆ. ಆರ್ಜೆಡಿ, ಕಾಂಗ್ರೆಸ್, ಸಿಪಿಐ(ಎಂಎಲ್) ಲಿಬರೇಶನ್, ಸಿಪಿಐ ಮತ್ತು ಸಿಪಿಐ(ಎಂ) ಒಳಗೊಂಡಿರುವ ಮಹಾಘಟಬಂಧನ್ ತನ್ನ ಬಳಿ 114 ಶಾಸಕರನ್ನು ಹೊಂದಿದೆ. ಮತ್ತೊಂದೆಡೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಒಬ್ಬ ಶಾಸಕರನ್ನು ಹೊಂದಿದೆ.