ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ವಿರುದ್ಧ ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ವೇಳೆ ‘ನುಡಿದಂತೆ ನಡೆದಿದ್ದೀವೆ, 5 ಗ್ಯಾರಂಟಿ ಕೊಟ್ಟಿದ್ದೇವೆ’ ಎಂಬ ಕರಪತ್ರ ಹಂಚಿಕೆ ಮಾಡಿದ್ದರು. ಈ ಹಿನ್ನೆಲೆ ಕಲಾಸಿಪಾಳ್ಯ ಠಾಣೆಗೆ ಚುನಾವಣಾ ಅಧಿಕಾರಿ ಸಂತೋಷ್ ದೂರು ನೀಡಿದ್ದರು. ಜನಪ್ರತಿನಿಧಿ ಕಾಯ್ದೆ 1950, 1951, 1989ರ ಅಡಿಯಲ್ಲಿ ಸೌಮ್ಯಾರೆಡ್ಡಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್ ವಿರುದ್ಧ FIR ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇತ್ತೀಚೆಗೆ ನಿಯೋಜಿಸಲಾಗಿದ್ದ ಅಧಿಕಾರಿ ಡಿಸಿಎಂ ಡಿಕೆ ಶಿವಕುಮಾರ್ಗೆ ಊಟ ಬಡಿಸಿದ್ದರು. ಆ ಚುನಾವಣಾಧಿಕಾರಿ ವಿರುದ್ಧ ಬಿಜೆಪಿ ದೂರು ನೀಡಿತ್ತು. ಜೊತೆಗೆ ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ನಿರ್ಮಿಸಿರೋ ‘ಭೈರತಿ ರಣಗಲ್’ ಜಾಹೀರಾತು ಮೊತ್ತವನ್ನ ಚುನಾವಣಾ ವೆಚ್ಚಕ್ಕೆ ಸೇರಿಸಬೇಕೆಂದು ಬಿಜೆಪಿ ದೂರಿತ್ತು.
ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಬಿಜೆಪಿ ಪ್ರಚಾರ ವಾಹನದಲ್ಲಿದ್ದ ಸಲಹಾ ಪೆಟ್ಟಿಗೆ ಸುಟ್ಟಿದ್ದಕ್ಕೆ ದೂರು ನೀಡಿತ್ತು. ಇನ್ನೂ ದಾವಣಗೆಯಲ್ಲಿ ಕಾಂಗ್ರೆಸ್ ಅಕ್ಕಿ ಹಂಚುತ್ತಿರುವ ಆರೋಪದ ಬಗ್ಗೆಯೂ ದೂರು ಸಲ್ಲಿಸಿದೆ. ಇದರ ಜೊತೆಗೆ ಪ್ರಚಾರಕ್ಕೆ ಮೋದಿ ಫೋಟೋ ಬಳಸಿದ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು.