ಸಂಡೂರು: ರಾಜ್ಯದಲ್ಲಿ 3 ಕ್ಷೇತ್ರಗಳ ಉಪ ಚುನಾವಣಾ ಕಣ ರಂಗೇರುತ್ತಿದೆ. ಅದರಲ್ಲೂ ಸಂಡೂರು ಕ್ಷೇತ್ರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಈ ನಡುವೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅವರ ಪತಿ ಸಂಸದ ಈ ತುಕರಾಂ ವಿರುದ್ಧ ಬಿಜೆಪಿ ಸರಣಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ.
ಈ.ತುಕರಾಂ ನಾಲ್ಕು ಬಾರಿ ಶಾಸಕ, ಒಮ್ಮೆ ಸಂಸದ ಆದರೆ ಸಂಡೂರು ಅಭಿವೃದ್ದಿ ಶೂನ್ಯ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಿದೆ. ಜನರು ಇದನ್ನು ನೆನಪಿಟ್ಟುಕೊಂಡಿದ್ದಾರೆ ಹಾಗೂ ಬದಲಾವಣೆಗೆ ಬದ್ಧರಾಗಿದ್ದಾರೆ ಎಂದು ಹೇಳಿದೆ.
ಅಷ್ಟೇ ಅಲ್ಲದೆ, ವಾಲ್ಮೀಕಿ ನಿಗಮದ ಬಗ್ಗೆ ಪೋಸ್ಟರ್ ಮಾಡಿರುವ ಬಿಜೆಪಿ, ಪರಿಶಿಷ್ಟರ ಹಣ ದುರುಪಯೋಗವಾದಾಗ ತುಟಿ ಬಿಚ್ಚದ ತುಕರಾಂ ಎಂಬ ಪೋಸ್ಟರ್ ಕೂಡಾ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ ಆಗಿದೆ. ತನ್ನ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದರೂ ಈ ತುಕರಾಂ ಧ್ವನಿ ಎತ್ತಿಲ್ಲ ಎಂದು ಪೋಸ್ಟರ್ನಲ್ಲಿ ಉಲ್ಲೇಖ ಮಾಡಲಾಗಿದ್ದು, ಎಸ್ ಟಿ ಸಮುದಾಯದ ಹಾಗೂ ಬಡವರ ವಿರೋಧಿ ಈ ತುಕರಾಂ ಎಂದು ಆರೋಪಿಸಿದೆ.
ಚಾಟಿ ಬೀಸಿದ ಪ್ರಲ್ಹಾದ ಜೋಶಿ
ಇನ್ನು ರಾಜ್ಯದಲ್ಲಿ ಪ್ರಜಾಪ್ರಭುತ್ವದಂತೆ ಜನ ಅಧಿಕಾರ ಕೊಟ್ಟಿದ್ದಾರೆ, ಅದನ್ನು ಸೌಜನ್ಯದಿಂದ ಚಲಾಯಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು. ಸಂಡೂರು ವಿಧಾನಸಭೆ ಕ್ಷೇತ್ರದ ಕುರೆಕುಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಬರೀ ಹಗರಣ, ಭ್ರಷ್ಟಾಚಾರ, ಮುಸ್ಲಿಂ ತುಷ್ಟೀಕರಣದಲ್ಲಿ ಮುಳಿಗೆದ್ದಿದೆ ಎಂದ ಸಚಿವರು, ಜನ ಕೊಟ್ಟ ಅಧಿಕಾರವನ್ನು ಸೌಜನ್ಯದಿಂದ ನಡೆಸಬೇಕು ಎಂದು ಹೇಳಿದರು. ಬಿಜೆಪಿ ಎಸ್ಟಿ ನಿಗಮ ಮಾಡಿಕೊಟ್ಟರೆ, ಕಾಂಗ್ರೆಸ್ ಕೊಳ್ಳೇ ಹೊಡೆಯುತ್ತಿದೆ: ಎಸ್ಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿಕೊಟ್ಟರೆ ಕಾಂಗ್ರೆಸ್ ಸರ್ಕಾರ ಅದಲ್ಲಿನ ಹಣ ಕೊಳ್ಳೇ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಯಾವತ್ತೂ ಬದ್ಧವಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ನಿಗಮ ಮಂಡಳಿ ಮಾಡಿದ್ದು, ಹೆಚ್ಚಿನ ಅನುದಾನ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅದರಲ್ಲಿನ ಹಣ ದೋಚುತ್ತಿದೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 189 ಕೋಟಿ ರೂಪಾಯಿ ಹಗರಣ ನಡೆದರೂ ಸಿಎಂ ಸಿದ್ದರಾಮಯ್ಯ ಅವರು 79 ಕೋಟಿ ಎನ್ನುತ್ತಿದ್ದಾರೆ. ಒಟ್ಟಾರೆ ನಿಗಮದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ಎಸ್ಟಿ ಸಮುದಾಯದ ಅಭಿವೃದ್ಧಿಗೆ ಇದ್ದ ಅನುದಾನ ಕಾಂಗ್ರೆಸ್ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದೆ ಎಂದು ಜೋಶಿ ಆರೋಪಿಸಿದರು.
ಗಣಿ ಅವಲಂಬಿತರ ಹಿತರಕ್ಷಣೆ
ಸಂಡೂರು ಕ್ಷೇತ್ರದಲ್ಲಿ ನ್ಯಾಯಯುತ ಗಣಿಗಾರಿಕೆ ಮತ್ತು ಗಣಿ ಕಾರ್ಮಿಕರ ಹಿತರಕ್ಷಣೆ ಕೆಲಸವನ್ನು ಬಿಜೆಪಿ ಮಾಡಲಿದೆ. ಇಲ್ಲಿ ನ್ಯಾಯಸಮ್ಮತವಾಗಿ ಗಣಿಗಾರಿಕೆ, ಕೈಗಾರಿಕೆ, ಗಣಿ ಕಾರ್ಮಿಕರ, ಬಡವರ ಪರ ಅಭಿವೃದ್ಧಿ ಒಟ್ಟಾರೆ ಸಂಡೂರಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.
ಬಂಗಾರು ಹನುಮಂತರನ್ನು ರಾಮನಂತೆ ಆಶೀರ್ವದಿಸಿ: ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಂಗಾರು ಹನುಮಂತು ಅವರನ್ನು ಇಲ್ಲಿಯ ಮತದಾರರು ಶ್ರೀರಾಮನ ಸ್ಥಾನದಲ್ಲಿ ನಿಂತು ಆಶೀರ್ವದಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಬೃಹತ್ ರೋಡ್ ಶೋ: ಇದಕ್ಕೂ ಮುನ್ನ ಕುರೇಕುಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿಲಾಯಿತು. ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ಅಪಾರ ಪ್ರಮಾಣದಲ್ಲಿ ನೆರೆದು ಮೆರವಣಿಗೆ ಯಶಸ್ವಿಗೊಳಿಸಿದರು. ಬಹಿರಂಗ ಪ್ರಚಾರ ಸಭೆಯಲ್ಲಿ ಬಿಜೆಪಿ ಮುಖಂಡ ಭೈರತಿ ಬಸವರಾಜ್, ಅಭ್ಯರ್ಥಿ ಬಂಗಾರು ಹನುಮಂತು ಮತ್ತಿತರರು ಇದ್ದರು.