ಬಳ್ಳಾರಿ, ಫೆ. 16 : ಬಳ್ಳಾರಿ ಜಿಲ್ಲೆಯ ವಿಮಾನ ನಿಲ್ದಾಣ ನಿರ್ಮಾಣ ಮತ್ತು ಅಪಾರಲ್ ಪಾರ್ಕ್ (ಜೀನ್ಸ್ ಪಾರ್ಕ್) ಕುರಿತು ಬಜೆಟ್ನಲ್ಲಿ ವಿಶೇಷ ಅನುದಾನ ಸಿಗುವ ಸಾಕಷ್ಟು ನಿರೀಕ್ಷೆಗಳು ಹುಸಿಯಾಗಿವೆ. ಪ್ರತಿ ಬಜೆಟ್ನಲ್ಲಿ ಘೋಷಣೆಯಾಗುವ ಯೋಜನೆಗಳ ಅನುಷ್ಠಾನದ ಕುರಿತು ಸರ್ಕಾರ ಎಲ್ಲಿಯೂ ವಿಷಯ ಪ್ರಸ್ತಾಪ ಮಾಡಿಲ್ಲ. ಬಳ್ಳಾರಿಯಲ್ಲಿ ಆಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಘೋಷಣೆಯಾಗಿದ್ದ, ಯೋಜನೆ ಪೇಪರ್ಗಳಲ್ಲಿಯೇ ಉಳಿದಿದೆ. ಈಗ, ಸಿದ್ದರಾಮಯ್ಯ ಅವರು ಮತ್ತೆರೆಡುಕಡೆಗಳಲ್ಲಿ ಆಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ಘೋಷಣೆ ಮಾಡಿರುವುದು ಏತಕ್ಕಾಗಿ? ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ. ರೈಲ್ವೆ, ರಸ್ತೆ, ವಿಮಾನಯಾನ ಸೇರಿ ಬಳ್ಳಾರಿ ಜಿಲ್ಲೆ ಯಾರ ಲೆಕ್ಕಕ್ಕೂ ಬಾರದ `ಅನಾಥಕೂಸಾ’ಗಿದೆ. ಕರ್ನಾಟಕ ಸರ್ಕಾರ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದ ನಂತರ, ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಬಳ್ಳಾರಿ ಬೈಪಾಸ್ ರಸ್ತೆ, ಔಟರ್ರಿಂಗ್ ರೋಡ್ ನಿರ್ಮಾಣದ ಕುರಿತು ವಿಷಯವನ್ನೇ ಪ್ರಸ್ತಾಪ ಮಾಡಿಲ್ಲ ಎಂದು ಬಿಜೆಪಿ ಮುಖಂಡರಾದ ಸಿದ್ದೇಶ್ ಊಳುರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.