ಸಿರುಗುಪ್ಪ: ಪ್ರತಿಯೊಬ್ಬರೂ ವೈದ್ಯರ ಸಲಹೆ ಪಡೆದು ನಿಗಧಿತ ಅವಧಿಯಲ್ಲಿ ರಕ್ತದಾನ ಮಾಡಿದರೆ ಆವರಿಸುವ ನಾನಾ ಖಾಯಿಲೆಗಳು ದೂರವಾಗಲಿವೆ, ಜೊತೆಗೆ ಆರೋಗ್ಯ ಸದೃಢವಾಗಿರಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ 74ನೇ ಜನ್ಮ ದಿನಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ನಾನಾ ಖಾಯಿಲೆಗಳಿಗೆ ತುತ್ತಾದವರಿಗೆ, ಹೆರಿಗೆ ವೇಳೆ, ರಸ್ತೆ ಅಪಘಾತ ಸಂಭವಿಸಿದ ವೇಳೆ ರಕ್ತದ ಅವಶ್ಯಕತೆ ಹೆಚ್ಚಿರಲಿದೆ, ಆರೋಗ್ಯವಂತ ಯುವಕ, ಯುವತಿಯರು, ಮಹಿಳೆಯರು ರಕ್ತದಾನ ಮಾಡುವುದರಿಂದ ಪ್ರಾಣವನ್ನು ಉಳಿಸಬಹುದು. ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಟ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಲು ಮುಂದಾಗಬೇಕು, ಇದರಿಂದ ಆರೋಗ್ಯದಲ್ಲಿ ಹೊಸ ಚೈತನ್ಯ ಮೂಡಲಿದೆ. ವಿಶೇಷವಾಗಿ ಯುವಕ, ಯುವತಿಯರು ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢವಾಗಿರುವ ಜೊತೆಗೆ ನೆನಪಿನ ಶಕ್ತಿ ಹೆಚ್ಚಾಗಲಿದೆ. ಇಡಿ ವಿಶ್ವ ಕಂಡ ಧೀಮಂತ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚು ಜನರು ಭಾಗವಹಿಸಿರುವುದು ಅತ್ಯಂತ ಸಂತಸ ಮೂಡಿಸಿದೆ, ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು. ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದವರಿಗೆ, ಪ್ರಮಾಣ ಪತ್ರಗಳನ್ನು ಹಾಗೂ ಹಣ್ಣು, ಹಾಲು, ಜ್ಯೂಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಸಿರುಗುಪ್ಪ ಮಂಡಲ ಅಧ್ಯಕ್ಷ ಶೇಖರ ಗೌಡ, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ್, ಶಂಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳಗಲ್ ಬಸವರಾಜ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಗಳಾದ ಅಂಬಣ್ಣ, ಗಾದಿಲಿಂಗಪ್ಪ, ಖಾಸಿಂ, ಬಂದೆನವಾಜ್, ಹನುಮೇಶ ಯಾದವ್ ಸೇರಿದಂತೆ ನೂರಾರು ಕಾರ್ಯಕರ್ತರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಗಣ್ಯವ್ಯಕ್ತಿಗಳ ಹುಟ್ಟು ಹಬ್ಬದ ನೆಪದಲ್ಲಿ ಬೆಂಬಲಿಗರು, ಆಯಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಲಕ್ಷಾಂತರ ರೂ.ಖರ್ಚು ಮಾಡುವುದು ಸಾಮಾನ್ಯ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಹಣ ಖರ್ಚು ಮಾಡುವುದು ಗಮನಿಸಿದ್ದೇವೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಹುಟ್ಟು ಹಬ್ಬದ ನಿಮಿತ್ತ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸ ಮೂಡಿಸಿದೆ. ಇದರಿಂದ ಸುಮಾರು ಜನರಿಗೆ ಅನುಕೂಲವಾಗಲಿದೆ.
ಎಚ್.ಹನುಮೇಶ – ಸಿರುಗುಪ್ಪ ನಿವಾಸಿ.