ಬೆಂಗಳೂರು, ಏ.1: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭೆ ಚುನಾವಣೆಯಲ್ಲಾದ ಹೀನಾಯ ಸೋಲಿನ ಕಹಿಯನ್ನು ಮರೆಯಲು ಬಿಜೆಪಿ ಮುಂದಾಗಿದೆ. ಅಲ್ಲದೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಲ್ಲಾ 28 ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದೆ. ಆದರೆ, ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟ ಎಂಬ ಮಾಹಿತಿ ಅರಿತ ಬಿಜೆಪಿ ಚಾಣಕ್ಯ ಎಂದು ಕರೆಯಲ್ಪಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಲು ಹಾಗೂ ಅತೃಪ್ತರನ್ನು ಮನವೊಲಿಸಲು ಅಖಾಡಕ್ಕಿಳಿಯುತ್ತಿದ್ದಾರೆ.
ಇಂದು ರಾತ್ರಿ 11 ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ ಅವರು ಲೋಕಸಭಾ ಚುನಾವಣಾ ಪ್ರಚಾರದ ಜೊತೆಗೆ ಅಸಮಾಧಾನ ಶಮನ ಮಾಡುವ ಉದ್ದೇಶವನ್ನೂ ಇಟ್ಟುಕೊಂಡಿದ್ದಾರೆ. ಇಂದು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿರುವ ಅವರು ನಾಳೆ ಬೆಳಗ್ಗೆ 9.30ಕ್ಕೆ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಜೊತೆ ಉಪಹಾರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕೇಂದ್ರ ಕ್ಷೇತ್ರ, ಉತ್ತರ ಕ್ಷೇತ್ರ, ದಕ್ಷಿಣ ಕ್ಷೇತ್ರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟ; ಅಮಿತ್ ಶಾ ಸಭೆ
ಸಮಾವೇಶದ ಬಳಿಕ ಮಧ್ಯಾಹ್ನ 3 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಅಮಿತ್ ಶಾ ಮತ್ತೆ ಸಭೆ ನಡೆಸಲಿದ್ದಾರೆ. ಗೆಲುವು ಕಷ್ಟಕರ ಎನ್ನುವ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೀದರ್ ಮತ್ತು ಬೆಳಗಾವಿ ಕ್ಷೇತ್ರಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಗೆಲುವಿಗೆ ಮಾಡಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಾಳೆ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲೇ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೋ ಬ್ಯಾಕ್ ಅಭಿಯಾನ
ಮಾಜಿ ಸಚಿವ ಡಾ ಕೆ ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕ ಖುಷಿಯಲ್ಲಿದ್ದಾರೆ. ಆದರೆ, ಕ್ಷೇತ್ರದ ಕಾರ್ಯಕರ್ತರು ಸುಧಾಕರ್ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ನೆಲಮಂಗಲ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮಹಿಳಾ ಮತ್ತು ಯುವ ಕಾರ್ಯಕರ್ತರು ಗೋ ಬ್ಯಾಕ್ ಸುಧಾಕರ್ ಅಭಿಯಾನವನ್ನು ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ, ಇದಕ್ಕೆ ಸುಧಾಕರ್ ಅವರ ನಿಷ್ಕ್ರಿಯತೆಯೇ ಕಾರಣ ಎಂದು ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ತನ್ನ ಪುತ್ರನಿಗೆ ನೀಡಬೇಕು ಎಂದು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ತೀವ್ರ ಲಾಭಿ ಮಾಡಿದ್ದರು. ಸದ್ಯ ಟಿಕೆಟ್ ಕೈತಪ್ಪಿದ ಹಿನ್ನೆಲೆ ವಿಶ್ವನಾಥ್ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ.
ತುಮಕೂರಿನಲ್ಲಿ ಮಾಧುಸ್ವಾಮಿ ಸೈಲೆಟ್; ಆದರೂ ಬಿಜೆಪಿಗೆ ಭೀತಿ
ತುಮಕೂರು ಲೋಕಸಭಾ ಕ್ಷೇತ್ರದ ಬಂಡಾಯ ಬಿಜೆಪಿಗೆ ಬಿಸಿ ತುಪ್ಪವಾಗಿದ್ದು, ನುಂಗಲು ಆಗದೇ, ಉಗಿಯಲು ಆಗದೆ ಹಿಂಸೆ ಅನುಭವಿಸುತ್ತಿದೆ. ಇಬ್ಬಿಬ್ಬರು ಮಾಜಿ ಸಚಿವರ ಟಿಕೆಟ್ ಪೈಪೋಟಿಯಲ್ಲಿ ವಿ ಸೋಮಣ್ಣ ಟಿಕೆಟ್ ಗಳಿಸಿದ್ದಾರೆ. ಇದು ಮಾಜಿ ಸಚಿವರೂ ಆಗಿರುವ ಸ್ಥಳೀಯ ಜೆಸಿ ಮಾಧುಸ್ವಾಮಿಗೆ ನುಂಗಲಾರದ ತುತ್ತಾಗಿದೆ. ಇದರಿಂದಾಗಿ ಬಿಜೆಪಿ ತೊರೆಯಲು ಮುಂದಾಗಿದ್ದ ಜೆಸಿ ಮಾಧುಸ್ವಾಮಿ ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಸಹ ಸೋಮಣ್ಣ ವಿರುದ್ಧದ ಅಸಮಾಧಾನ ಮಾತ್ರ ತಣ್ಣಗಾಗಿಲ್ಲ.
ಯಡಿಯೂರಪ್ಪ ಹೇಳಿದ್ದಕ್ಕೆ ನಾನು ಚುನಾವಣೆಗೆ ರೆಡಿಯಾಗಿದ್ದೆ. ಯಡಿಯೂರಪ್ಪ ಅವರನ್ನು ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಹೋಗಿದ್ದೆ. ಈಗ ಬಿ.ಎಸ್.ಯಡಿಯೂರಪ್ಪ ಪಕ್ಷ ಬಿಡುವುದು ಬೇಡ ಎಂದಿದ್ದಾರೆ. ಯಡಿಯೂರಪ್ಪ ಜತೆ ಪಕ್ಷದ ವಿಚಾರವಷ್ಟೇ ಚರ್ಚೆ ಆಗಿದೆ. ಸೋಮಣ್ಣಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ಆಗಿಲ್ಲ. ಈ ಬಗ್ಗೆ ಒತ್ತಡ ಹಾಕಬೇಡಿ ಎಂದು ಯಡಿಯೂರಪ್ಪಗೆ ಹೇಳಿದ್ದೇನೆ ಎಂದು ಮಾಧುಸ್ವಾಮಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಮಾಧುಸ್ವಾಮಿ ಅವರು ಸೋಮಣ್ಣಗೆ ಬೆಂಬಲ ಇಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ದಾವಣಗೆರೆಯಲ್ಲಿ ಕಡಿಮೆಯಾಗದ ರೇಣುಕಾಚಾರ್ಯ ಮುನಿಸು
ಮೈತ್ರಿಯಾದರೂ ಬಿಜೆಪಿಯ ಮುಖಂಡರು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪ ಮಾಡಿದ್ದರು. ಅಲ್ಲದೆ, ನಾನೊಂದು ತೀರಾ ನೀನೊಂದು ತೀರ ಎನ್ನುವಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು. ಅದಾಗ್ಯೂ, ನಿನ್ನೆ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಮಾತುಕತೆ ನಡೆಸಿ ಚುನಾವಣೆಯಲ್ಲಿ ಒಟ್ಟಾಗಿ ಹೋಗುವ ಭರವಸೆಯನ್ನು ನೀಡಿದ್ದಾರೆ. ಬಳಿಕ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸುವುದಾಗಿ ಜೆಡಿಎಸ್ ನಾಯಕರು ಹೇಳಿದ್ದಾರೆ. ಆ ಮೂಲಕ ದಾವಣಗೆರೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಮುನಿಸು ಮರೆತು ಒಂದಾಗಿದ್ದಾರೆ.
ಆದರೆ, ದಾವಣಗೆರೆ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರ ಮುನಿಸು ಶಮನವಾಗಿಲ್ಲ. ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮತ್ತು ಇವರ ಬೆಂಬಲಿಗ ನಾಯಕರು ಪಕ್ಷದ ವಿರುದ್ಧ ತೀವ್ರ ಮುನಿಸುಗೊಂಡಿದ್ದಾರೆ. ರಾಜಕೀಯ ಗುರು ಯಡಿಯೂರಪ್ಪ ಅವರೇ ಸಭೆ ನಡೆಸಿ ಮಾತುಕತೆ ನಡೆಸಿದರೂ ಶಿಷ್ಯ ರೇಣುಕಾಚಾರ್ಯ ಅವರ ಕೋಪ ತಣ್ಣಗಾಗಿಲ್ಲ. ಸಭೆಯ ನಂತರ ರೇಣುಕಾಚಾರ್ಯ ಅವರು ಮತ್ತೆ ಸಭೆ ಸೇರುವ ಸೂಚನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಬಂಡಾಯ ಎದ್ದ ತಂದೆ–ಮಗ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಸಂಸದ ನಾರಾಯಣಸ್ವಾಮಿ ಬದಲಿಗೆ ಯಡಿಯೂರಪ್ಪ ಅವರ ಆಪ್ತ, ಮಾಜಿ ಸಿಎಂ ಗೋವಿಂದ್ ಕಾರಜೋಳ ಅವರಿಗೆ ನೀಡಲಾಗಿದೆ. ಆದರೆ, ತನ್ನ ಪುತ್ರ ರಘುಚಂದನ್ಗೆ ಟಿಕೆಟ್ ಕೊಡಬೇಕು ಎಂದು ತೀವ್ರ ಪೈಪೋಟಿ ನಡೆಸಿದ್ದ ಶಾಸಕ ಎಂ ಚಂದ್ರಪ್ಪ ಅವರು ಇದೀಗ ಕ್ಷೇತ್ರದಲ್ಲಿ ಬಂಡಾಯವೆದ್ದಿದ್ದಾರೆ. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಚಂದ್ರಪ್ಪ ಅವರು, ಏಪ್ರಿಲ್ 3 ರಂದು ರಘುಚಂದನ್ ನಾಮಪತ್ರ ಸಲ್ಲಿಕೆಗೆ ಚಿಂತನೆ ಮಾಡಲಾಗಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಶೆಟ್ಟರ್ ಗೋ ಬ್ಯಾಕ್ ಅಭಿಯಾನ
ಕಾಂಗ್ರೆಸ್ನಿಂದ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರು ಹಾವೇರಿ, ಧಾರವಾಡ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ, ಎರಡೂ ಕ್ಷೇತ್ರಗಳ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅತಂತ್ರ ಸ್ಥಿತಿಯಲ್ಲಿದ್ದ ಶೆಟ್ಟರ್ ಅವರಿಗೆ ಮಂಗಳಾ ಅಂಗಡಿ ಹಾಲಿ ಸಂಸದರಾಗಿರುವ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹೀಗಾಗಿ ಸ್ಥಳೀಯ ನಾಯಕರು ಅಸಮಾಧಾನಗೊಂಡಿದ್ದು, ಅಭ್ಯರ್ಥಿ ವಿರುದ್ಧ ಗೂ ಬ್ಯಾಕ್ ಅಭಿಯಾನ ನಡೆಸುತ್ತಿದ್ದಾರೆ.
ಬೀದರ್ನಲ್ಲಿ ಬಿಜೆಪಿಗೆ ಕೊಂಚ ಸಮಾಧಾನ
ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಹಾಲಿ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ನೀಡದಂತೆ ಸ್ಥಳೀಯ ನಾಯಕರಾದ ಪ್ರಭು ಚೌಹಾಣ್ ಮತ್ತಿತರರು ಪಟ್ಟು ಹಿಡಿದಿದ್ದರು. ಬಿಜೆಪಿ ಸಭೆಗಳಲ್ಲಿ ಖೂಬಾ ವಿರುದ್ಧ ಚೌಹಾಣ್ ನೇರ ನೇರವಾಗಿ ವಾಗ್ದಾಳಿ ನಡೆಸಿದ್ದರು. ಸಮಾವೇಶದಲ್ಲಿ ಆಕ್ರೋಶ ಭರಿತವಾಗಿ ಮಾತನಾಡಿದ್ದ ಚೌಹಾಣ್, ಸಾಮಾನ್ಯ ಕಾರ್ಯಕರ್ತರನಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಖೂಬಾ ಮುಂದೆಯೇ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಮನವಿ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಮತ್ತೆ ಖೂಬಾ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಭು ಚೌಹಾಣ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಚೌಹಾಣ್ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.