ಅನ್ನಪೂರ್ಣ ತುಕಾರಾಂ ಪರವಾಗಿ ಮತಯಾಚನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಡೂರು, ನವೆಂಬರ್̇8: ಸಂಡೂರಿನ ಗುಡ್ಡಗಳನ್ನು ನೆಲಸಮ ಮಾಡಿ ಬಳ್ಳಾರಿ ರಿಪಬ್ಲಿಕ್ ಮಾಡಿಕೊಂಡಿದ್ದ ರೆಡ್ಡಿ ಪಟಾಲಂಗಳಿಗೆ ಅವಕಾಶ ನೀಡಬೇಡಿ. ಅವರು ಅಕ್ರಮ ಗಣಿಗಾರಿಕೆ ಮಾಡಿ ಲೂಟಿ ಮಾಡಿದವರು ಅವರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಮತನೀಡಿ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಸಂಡೂರಿನ ಬನ್ನಿಹಟ್ಟಿ ಗ್ರಾಮದಲ್ಲಿ ಅನ್ನಪೂರ್ಣ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆ ಲೂಟಿ ಮಾಡಿದವರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿಯನ್ನು ರೆಡ್ಡಿಗಳು ತೆಗೆದುಕೊಂಡಿದ್ದಾರೆ. ಬಳ್ಳಾರಿಯನ್ನು ಇವರ ಕಪಿಮುಷ್ಟಿಯಿಂದ ತಪ್ಪಿಸಲು ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ. ಬಳ್ಳಾರಿ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ರೆಡ್ಡಿಗಳು ಬೇಕಾಗಿಲ್ಲ. ಸ್ವಾರ್ಥಕೋಸ್ಕರ, ಅಕ್ರಮ ಹಣ ಮಾಡಲು ಇಡೀ ಜಿಲ್ಲೆ ಹಾಳು ಮಾಡಿದ್ದರು. ಆದ್ದರಿಂದ ಈ ಬಾರಿ ಅವರಿಗೆ ಮತ ನೀಡದೆ ಬುದ್ಧಿಕಲಿಸಿ ಎಂದು ಹೇಳಿದರು.
ಜನಾರ್ದನ ರೆಡ್ಡಿ ಪಟಾಲಂ ಬಳ್ಳಾರಿಯಲ್ಲಿ ರಾಜಕೀಯವಾಗಿ ಬೆಳೆಯಬಾರದು. ಅವರು ತಮ್ಮ ಸ್ವಾರ್ಥಕೋಸ್ಕರ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಡೂರಿಗೆ ಬಿಜೆಪಿಯವರು ಏನೂ ಮಾಡಿಲ್ಲ. ಶಾಲೆ. ರಸ್ತೆ. ಆಸ್ಪತ್ರೆ ಆಗಿದ್ದರೆ ಅದು ಸಂತೋಷ್ ಲಾಡ್ ಹಾಗೂ ತುಕಾರಾಂ ಅವರಿಂದ ಎಂದರು.
ಕಳೆದ ನಾಲ್ಕು ಬಾರಿ ತುಕಾರಾಂ ಅವರನ್ನು ಗೆಲ್ಲಿಸಿದ್ದೀರಿ. ಈಗ ಅನ್ನಪೂರ್ಣ ಅವರು ಆಶೀರ್ವಾದ ಕೇಳಲು ಬಂದಿದ್ಧಾರೆ. ತುಕಾರಾಂ ಅವರ ಪರವಾಗಿ ಜನಾಭಿಪ್ರಾಯ ಇದ್ದ ಕಾರಣ ಅವರು ಸಂಸತ್ತಿಗೆ ಸ್ಪರ್ಧಿಸಿದರು. ಈಗ ಅನ್ನಪೂರ್ಣ ಅವರಿಗೆ ಅವಕಾಶ ನೀಡಲಾಗಿದೆ. ಇದು ಉಪ ಚುನಾವಣೆ ಆದರೂ ಮಹತ್ವದ ಚುನಾವಣೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಶ್ರಮಿಸಿದ್ದು ಕಾಂಗ್ರೆಸ್. ಆಗ ಬಿಜೆಪಿ ಮುಖಂಡರು ವಿರೋಧ ಮಾಡಿದ್ದರು. ಈಗ ಅಕ್ರಮ ಗಣಿಗಾರಿಕೆ ಹಣ ತಂದು ಓಟು ಕೇಳ್ತಾ ಇದ್ದಾರೆ. ನನ್ನ ಮೇಲೆಯೇ ಸುಳ್ಳು ಕೇಸು ಹಾಕಿದ್ದಾರೆ. ಜನವಿರೋಧಿ, ಮೀಸಲಾತಿ ವಿರೋಧಿ ಬಿಜೆಪಿ ಮಾತಿಗೆ ಮರುಳಾಗಬೇಡಿ ಎಂದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಸಂಡೂರಿನ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳು ಇರಲಿಲ್ಲ. ಸಂಡೂರಲ್ಲಿ ಕಾಂಗ್ರೆಸ್ ಅಭಿವೃದ್ದಿ ಮಾಡಿದೆ. ಕೆಲಸ ಮಾಡಿದ್ದೇವೆ, ಮತ ಕೇಳ್ತಿದ್ದೇವೆ. ಬಿಜೆಪಿ ಯಾವ ಜನ ಪರ ಯೋಜನೆ ತಂದಿಲ್ಲ. ಮೋದಿ ನೀಡಿದ ಭರವಸೆ ಬಗ್ಗೆ ಚರ್ಚೆ ಮಾಡ್ತಿಲ್ಲ. ಬಿಜೆಪಿಗೆ ಗ್ಯಾರಂಟಿಗಳನ್ನು ಸಹಿಸೋಕೆ ಆಗ್ತಿಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದರು.
ಈ ವೇಳೆ ಸಭೆಯಲ್ಲಿ ಸಚಿವರಾದ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಸಂಸದ ಈ ತುಕಾರಾಮ್, ಶಾಸಕರಾದ ಗಣೇಶ್, ಅಜಯ್ ಕುಮಾರ್ ಸಿಂಗ್ ರವರು ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.