ಬಡವರ ಕೊಳ್ಳುವ ಶಕ್ತಿ ಹೆಚ್ಚಾಗುವ ಗುರಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದೇವೆ
ಬೆಂಗಳೂರು, ಫೆಬ್ರವರಿ 16: ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ , ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟ್ ನಲ್ಲಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು 2024-25 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ದೇಶದಲ್ಲಿ ನಿರುದ್ಯೋಗ, ಹಣದುಬ್ಬರುದ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ನಾವು ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇzರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿಗೂ ಅನುದಾನ
2024-25 ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷ ಬಜೆಟ್ ಗಾತ್ರ 3,27,747 ಕೋಟಿ ರೂ.ಇತ್ತು. ಕಳೆದ ಬಜೆಟ್ ಗಿಂತ 46,636 ಕೋಟಿ ರೂ. ಹೆಚ್ಚಾಗಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಬೆಳವಣಿಗೆಯಲ್ಲಿ ಶೇ. 13 ರಷ್ಟು ಬೆಳವಣಿಗೆಯಾಗಿದೆ. ಆರ್ಥಿಕವಾಗಿ ದಿವಾಳಿಯಾಗಿದೆ , ಗ್ಯಾರಂಟಿ ಜಾರಿಯಿಂದಾಗಿ ಮತ್ತು ಮಹಿಳೆಯರು , ಬಡವರಿಗೆ ಅವಮಾನವಾಗುವ ರೀತಿಯಲ್ಲಿ ‘ಬಿಟ್ಟಿ ಗ್ಯಾರಂಟಿ’ ಎಂಬ ಟೀಕೆ ಬಂದಿದೆ. ಈ ವರ್ಷ 36,000 ಕೋಟಿ ರೂ. ಗ್ಯಾರಂಟಿಗಳಿಗೆ ಕೊಟ್ಟಿದ್ದರೂ ಕೂಡ ಅಭಿವೃದ್ಧಿಗೂ ಅನುದಾನವನ್ನು ಮೀಸಲಿರಿಸಿದ್ದೇವೆ. ಬರಗಾಲ ನಡುವೆಯೂ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು , ಸುಮಾರು 35,000 ಕೋಟಿ ರೂ. ಆಹಾರದ ಉತ್ಪಾದನೆಯಲ್ಲಿ ನಷ್ಟವಾಗಿದೆ. 18171 ಕೋಟಿ ರೂ.ಗಳನ್ನು ಎನ್ ಡಿ ಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರವನ್ನು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಎನ್.ಡಿ.ಆರ್ ಎಫ್ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗದವರು. ಅದು ರಾಜ್ಯದಿಂದ ಸಂಗ್ರಹಿಸಿರುವ ಹಣ. ಕೇಂದ್ರ ಸರ್ಕಾರದ ಅನುದಾನವಲ್ಲ. ಐದು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ, ಸಭೆಯನ್ನೂ ಕರೆದಿಲ್ಲ ಎಂದು ವಿವರಿಸಿದರು.
ಬಿಜೆಪಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ
ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿಗೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ.್ಲ ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ. ಕಾಮಾಲೆ ರೋಗಿಗಳಿಗೆ ಕಂಡಿದ್ದೆಲ್ಲಾ ಹಳದಿಯಂತೆ ಆಗಿದೆ. ರಾಜಕೀಯ ಹೇಳಿಕೆ ಬೇಡ ಎನ್ನುವುದಿಲ್ಲ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಪ್ರಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡುತ್ತಾರೆ. ಪ್ಲಕಾರ್ಡ್ ಹಿಡಿದಿದ್ದರು. ಬಜೆಟ್ ಕೇಳಬಾರದು ಎಂದು ಯೋಚಿಸಿಕೊಂಡೇ ಬಂದಿದ್ದರು. ನಾನು ವಸ್ತುಸ್ಥಿತಿಯನ್ನು ಹೇಳಿದರೆ ಅವರಿಗೆ ಅದು ನುಂಗಲಾರದ ತುತ್ತು. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ ಎಂದರು.
ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ?
ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯವನ್ನು ಜನರಿಗೆ ಹೇಳುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅವರು ಕೂಡ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸದೇ ಕೇಂದ್ರದವರನ್ನು ಕೇಳಬೇಕಿತ್ತು. ಕೋಲಾರ ಸಂಸದ ಮುನಿಸ್ವಾಮಿಯವರು ಅವರು ಸಂಸತ್ತಿನಲ್ಲಿ ಒಂದು ದಿನವೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬಾಯಿಬಿಡಲಿಲ್ಲ. ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ? ಅವರು ಸಂಸದರಾಗಲು ಲಾಯಕ್ಕೇ ಎಂದರು. ಕೇಂದ್ರ ಸರ್ಕಾರದಿಂದ ನ್ಯಾಯಯುತವಾದದ್ದು ಕೇಳಲು ಇವರಿಗೆ ಸಾಧ್ಯವಿಲ್ಲ ಎಂದರೇ ಏನು ಸೂಚಿಸುತ್ತದೆ. ನಾನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ , ಕೇಂದ್ರದ ಅನುದಾನವನ್ನು ಪಡೆಯಿರಿ ಎಂದು ಒತ್ತಾಯಿಸಿದ್ದೆ. 15 ನೇ ಹಣಕಾಸು ಆಯೋಗದವರು ವಿಶೇಷ ಅನುದಾನ 5495 ಕೋಟಿ ರೂ ವಿಶೇಷ ಅನುದಾನ ಪಡೆಯಲು ಹೇಳಿದ್ದೆ. ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ ಕೊಟ್ಟಿದ್ದಾರೆ. ಅದನ್ನು ಪಡೆಯಿರಿ ಎಂದು ಹೇಳಿದ್ದೆ. ಒಟ್ಟು 11495 ಕೋಟಿ ರೂ. ಶಿಫಾರಸ್ಸು ಮಾಡಿರುವುದನ್ನು ಒತ್ತಾಯ ಮಾಡಿ ಎಂದು ಅವರಿಗೆ ಒತ್ತಾಯಿಸಿದ್ದೆ. ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ? ಭದ್ರಾ ಮೇಲ್ದಂಡೆಗೆ 2023-24 ಕೇಂದ್ರ ಬಜೆಟ್ ನಲ್ಲಿ 5300 ಕೋಟಿ ಕೊಡುತ್ತೇವೆ ಎಂದಿದ್ದರು. ಅದನ್ನೇ ಇಲ್ಲಿನ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ನರೇಂದ್ರ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಹೇಳಿದವರು ಇವರೇ ಆದರೆ ಇನ್ನೂ ಆಗಿಲ್ಲವೆಂದರೆ ಅವರಿಗೆ ಕೋಪ ಏಕೆ? ಇದು ಕನ್ನಡ ಜನರಿಗೆ ಮಾಡುತ್ತಿರುವ ದ್ರೋಹ. ಇದು ಪ್ರಜಾಪ್ರಭುತ್ವದ ವಿರೋಧವಲ್ಲವೇ ? ಎಂದು ಪ್ರಶ್ನಿಸಿದರು.
ರಾಜಕೀಯ ಮಂಜು ಕವಿದಿದೆ
ಕೇಂದ್ರ ಹಣಕಾಸು ಸಚಿವೆ ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಬಾಷಣದ ಭಾಗವನ್ನು ಓದಿ ಹೇಳಿದ ಮುಖ್ಯಮಂತ್ರಿಗಳು, ಪ್ಲಕಾರ್ಡ್ ಹಿಡಿದು ಬಂದರೆ ಕರ್ನಾಟಕದ ಜನರಿಗೆ ಮಾಡುವ ದ್ರೋಹ ಎಂದರು. ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ ? ನಾನು ಈ ವರ್ಷ ಗ್ಯಾರಂಟಿಗಳಿಗೆ 36000 ಕೋಟಿ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ ಎಂದು ಸಾಬೀತು ಮಾಡಲಿ. ಚರ್ಚೆ ಮಾಡಬಹುದಿತ್ತು. ಅದಕ್ಕೆ ಇವರ ತಲೆಯಲ್ಲಿ ಏನೂ ಇಲ್ಲ, ರಾಜಕೀಯ ಮಂಜು ಕವಿದಿದೆ. ಕನ್ನಡಿಗರ ಜನದ್ರೋಹದ ಕೆಲಸ ಮಾಡಿದ್ದಾರೆ ಎಂದರು.
ಸಾಲ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಾನು ಸ್ವಾತಂತ್ರ್ಯ ಬಂದಾಗಿನಿಂದ ಹಣಕಾಸಿನ ಮಂತ್ರಿಯಾಗಿರುವವರೆಗೆ ಈ ರಾಜ್ಯದ ಮೇಲೆ 2,46,000 ಕೋಟಿ ಸಾಲವಿದ್ದು , ನಾನು ಮಾಡಿರುವದು 1.12 ಲಕ್ಷ ಕೋಟಿ ರೂ.ಗಳು ಮಾತ್ರ. ಇವರ ಬಜೆಟ್ ನಲ್ಲಿ ಕೇಲದ ವರ್ಷ 80 ಸಾವಿರ ಕೋಟಿ ರೂ.ಗಳ ಸಾಲ ಮಾಡಿದ್ದಾರೆ ಎಂದರು.