ಬೆಂಗಳೂರು, ಫೆಬ್ರವರಿ 15: ದೆಹಲಿಗೆ ಹೊರಟಿದ್ದ ನಮ್ಮ ರಾಜ್ಯದ ರೈತರನ್ನು ವಶಕ್ಕೆ ಪಡೆದು ಪೊಲೀಸರು ವಾರಾಣಸಿಗೆ ಸ್ಥಳಾಂತರಿಸುತ್ತಿದ್ದಾರೆ. ರೈತರನ್ನು ಸ್ಥಳಾಂತರಿಸದೆ ಕೂಡಲೇ ಬಿಡುಗಡೆ ಮಾಡಬೇಕೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ರೈತರು ನ್ಯಾಯುತವಾಗಿ ಪ್ರತಿಭಟನೆಗೆ ತೆರಳುತ್ತಿದ್ದರು, ಅದು ಸಂವಿಧಾನಿಕ ಹಕ್ಕು. ರಾಜ್ಯದ ರೈತರನ್ನು ಭೋಪಾಲ್ ಪೊಲೀಸರು ಬಂಧಿಸಿರುವುದು ದುರದೃಷ್ಟಕರ. ಮಧ್ಯಪ್ರದೇಶದ ಪೊಲೀಸರು ರೈತರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ನಮ್ಮ ರೈತರನ್ನು ವಶಕ್ಕೆ ಪಡೆದು ನಾಲ್ಕು ದಿವಸವಾಗಿದೆ. ಹೀಗಾಗಿ ರೈತರನ್ನು ಸ್ಥಳಾಂತರಿಸದೆ ಕೂಡಲೆ ಬಿಡುಗಡೆಗೊಳಿಸುವಂತೆ ಪತ್ರದ ಮೂಲಕ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ರೈತರ ಯೋಗಕ್ಷೇಮ ವಿಚಾರಿಸಿದರು.
ರೈತರು ಪೊಲೀಸರ ವಶಕ್ಕೆ ಏಕೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯದ 70 ರೈತರು ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಮೂಲಕ ದೆಹಲಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮಧ್ಯ ಪ್ರದೇಶದ ಭೋಪಾಲ್ನಲ್ಲಿ ಪೊಲೀಸರು ಸೋಮವಾರ (ಫೆ.12) ವಶಕ್ಕೆ ಪಡೆದಿದ್ದರು. ಧಾರವಾಡ ಜಿಲ್ಲೆಯ 16 ರೈತರು ಕೂಡ ಇದರಲ್ಲಿ ಸೇರಿದ್ದಾರೆ.
ವಶಕ್ಕೆ ಪಡೆಯಲಾಗಿರುವ ರೈತರನ್ನು ಕಲ್ಯಾಣ ಮಂಟಪವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು. ಅಲ್ಲಿಯೇ ‘ರೈತ ವಿರೋಧಿ ಮಧ್ಯಪ್ರದೇಶ ಪೊಲೀಸರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ರತರು ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದರು.