ಬೆಂಗಳೂರು: ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮ 2.0ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮ್ಮ ತಮ್ಮ ಸಮಸ್ಯೆ ಹೇಳಿಕೊಂಡು ರಾಜ್ಯದ ನಾನಾ ಪ್ರದೇಶಗಳಿಂದ 10,000ಕ್ಕೂ ಹೆಚ್ಚು ಮಂದಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಆಗಮಿಸಿ, ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೂರು ತಿಂಗಳೊಳಗೆ ಅರ್ಜಿಗಳು ಇತ್ಯರ್ಥವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾನೂನು ರೀತಿ ಬಗೆಹರಿಸದಿದ್ದರೆ ಹಿಂಬರಹ ಕೊಡುವಂತೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇನೆ. ನಮ್ಮ ಅರ್ಜಿಗೆ ಪರಿಹಾರ ಸಿಗಲಿಲ್ಲ ಎಂಬ ಭಾವನೆ ಯಾರಿಗೂ ಬೇಡ. ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮವಾಗಿದೆ. ಕಳೆದ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಅರ್ಜಿಗಳು ಬಂದಿದ್ದವು. ಅದರಲ್ಲಿ ಶೇಕಡಾ 89ರಷ್ಟು ಅರ್ಜಿಗಳಿಗೆ ಸ್ಪಂದಿಸುವ ಕೆಲಸ ಆಗಿದೆ. ನವಂಬರ್ 27ರಂದು ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಬಹುತೇಕ ಪರಿಹಾರ ಸಿಕ್ಕಿದೆ. ಇಂದೂ ಕೂಡ ನಿಮ್ಮ ಬಳಿಗೆ ಬಂದು ಅರ್ಜಿಗಳನ್ನು ಸ್ವೀಕಾರ ಮಾಡುತ್ತೇನೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜನರು ಬಂದಿದ್ದಾರೆ. ಎಲ್ಲರ ಅಹವಾಲುಗಳನ್ನೂ ಆಲಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದು ಇನ್ನೂ 9 ತಿಂಗಳಾಗಿಲ್ಲ. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗೇಲಿ ಮಾಡುತ್ತಿದ್ದರು. ಗ್ಯಾರಂಟಿ ಜಾರಿ ಆಗಲ್ಲ ಎಂದು ಹೇಳುತ್ತಿದ್ದರು. ಈಗ ಕೊಡುತ್ತಾರೆ, ಲೋಕಸಭಾ ಚುನಾವಣೆ ನಂತರ ನಿಲ್ಲಿಸುತ್ತಾರೆ ಎಂಬುದಾಗಿ ವಿಪಕ್ಷ ಲೀಡರ್ಗಳು ಸಹ ಹೇಳುತ್ತಿದ್ದಾರೆ. ಇದು ಬಡವರಿಗಾಗಿ ತಂದ ಕಾರ್ಯಕ್ರಮಗಳಾಗಿವೆ. ಅಸಮಾನತೆಯನ್ನು ಹೋಗಲಾಡಿಸಲು ತಂದ ಕಾರ್ಯಕ್ರಮವಾಗಿದೆ. ಸಮಸಮಾಜ ನಿರ್ಮಾಣದ ಮೇಲೆ ನಾವು ನಂಬಿಕೆ ಇಟ್ಟವರು. ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಬೇಕು, ಭ್ರಾತೃತ್ವ ಬೆಳೆಯಬೇಕು. ವಿಪಕ್ಷದವರು ಸುಳ್ಳು ಹೇಳಿ ದಾರಿ ತಪ್ಪಿಸುತ್ತಾರೆ. ಅವರ ಮಾತುಗಳನ್ನು ಕೇಳಬೇಡಿ, ಸುಳ್ಳು ಹೇಳುತ್ತಾರೆ ಎಂದರು.
ಇವತ್ತು ಎರಡನೇ ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಳೆದ ಜನಸ್ಪಂದನಲ್ಲಿ ಐದು ಸಾವಿರದಷ್ಟು ಅರ್ಜಿಗಳು ಬಂದಿದ್ದವು. ಶೇ. 98ರಷ್ಟು ಅರ್ಜಿಗಳನ್ನೆಲ್ಲ ಅಧಿಕಾರಿಗಳು ಇತ್ಯರ್ಥ ಮಾಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ತಮ್ಮ ಸಮಸ್ಯೆ ಹೊತ್ತು ಇಲ್ಲಿಗೆ ಬಂದಿದ್ದೀರಿ. ನೀವಿರುವ ಸ್ಥಳಕ್ಕೆ ಬಂದು ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ. ನಮ್ಮ ಜಿಲ್ಲಾ ಮಂತ್ರಿಗಳು 108 ಜನಸ್ಪಂದನ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆಡಳಿತ ನೇರವಾಗಿ ಜನರ ಬಳಿಗೆ ಹೋಗಿ ಸಮಸ್ಯೆಗೆ ಸ್ಪಂದಿಸುವುದು ಜನಸ್ಪಂದನದ ಉದ್ದೇಶವಾಗಿದೆ. ಸಣ್ಣಪುಟ್ಟ ಸಮಸ್ಯೆ ಹೊತ್ತು ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಬೇಕು. ನಿಮ್ಮ ಸಮಸ್ಯೆಗಳು ಕಾನೂನು ಬದ್ಧವಾಗಿದ್ದರೆ ಪರಿಹಾರ ಸಿಕ್ಕೇ ಸಿಗುತ್ತದೆ. ನವೆಂಬರ್ 27 ರಂದು ಕೊಟ್ಟ ಅರ್ಜಿಗಳಿಗೆ ಶೇ. 98 ಪರಿಹಾರ ಸಿಕ್ಕಿದೆ ಎಂದು ಹೇಳಿದರು.
ಭಾಷಣದ ಬಳಿ ಮುಖ್ಯಮಂತ್ರಿಗಳೇ ಖುದ್ದು ಜನರ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸ್ನಾತಕೋತ್ತರ ಪದವಿ ಪಡೆದಿರುವ ನವ್ಯಶ್ರೀ ಸೇರಿದಂತೆ ಇತರೆ ಹಲವು ಯುವಕ-ಯುವತಿಯವರು ಉದ್ಯೋಗಕ್ಕಾಗಿ ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದನೆ ನೀಡಿದ ಮುಖ್ಯಮಂತ್ರಿಗಳು ಮನವಿಯನ್ನು ಪರಿಗಣಿಸುವ ಭರವಸೆ ನೀಡಿದರು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸತ್ಯನಾರಾಯಣ್ ಎಂಬವರು ತಮ್ಮ ಆರೋಗ್ಯ ರಕ್ಷಣೆಗೆ ಸಹಾಯ ಮಾಡುವಂತೆ ಮನವಿ ಮಾಡಿದರು.
ಇದೇ ವೇಳೆ ‘ಗೃಹ ಲಕ್ಷ್ಮಿ’ ಯೋಜನೆ ಅಡಿಯಲ್ಲಿ ತಮಗೆ ತಿಂಗಳಿಗೆ ರೂ.2,000 ಬರುತ್ತಿಲ್ಲ ಎಂದು ಹೇಳಿಕೊಂಡು ಹಲವು ಮಹಿಳೆಯೂ ದೂರು ಸಲ್ಲಿಸಿದ್ದೂ ಕೂಡ ಕಂಡು ಬಂದಿತು. ತಮ್ಮ ಪತ್ನಿಯರ ಪರವಾಗಿ ಹಲವು ಪುರುಷರು ಮುಖ್ಯಮಂತ್ರಿಗಳ ಬಳಿ ಸಮಸ್ಯೆ ಹೇಳಿಕೊಂಡರು.