ಕೊಪ್ಪಳ, (ಮಾರ್ಚ್ 04): ನಗರದಲ್ಲಿ ಬಲ್ಟೋಟ ಸ್ಟೀಲ್ ಪ್ಯಾಕ್ಟರಿಗೆ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು. ಈಗಾಗಲೇ ಕೊಪ್ಪಳ ಬಂದ್ ಕೂಡಾ ನಡೆಸಿದ್ದಾರೆ. ಸ್ವತ ಗವಿಮಠದ ಸ್ವಾಮೀಜಿ, ಯಾವುದೇ ಕಾರಣಕ್ಕೂ ಪ್ಯಾಕ್ಟರಿ ಆರಂಭವಾಗಬಾರದು ಎಂದು ಬೀದಿಗಳಿದು ಹೋರಾಟ ಮಾಡಿದ್ದಾರೆ. ಈ ಸಂಬಂಧ ಇಂದು(ಮಾರ್ಚ್ 04) ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ನಿಯೋಗ, ಸಿಎಂ ಭೇಟಿ ಮಾಡಿದ್ದು, ಕೂಡಲೇ ಫ್ಯಾಕ್ಟರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲಾ ಜನರು ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಹೌದು.. ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿ, ರಾಜ್ಯದ ಎರಡನೇ ಅತಿ ದೊಡ್ಡ ಸ್ಟೀಲ್ ಪ್ಯಾಕ್ಟರಿ ಆರಂಭಕ್ಕೆ ಬಲ್ಡೋಟ ಸಂಸ್ಥೆ ಮುಂದಾಗಿದೆ. ಬರೋಬ್ಬರಿ 54 ಸಾವಿರ ಕೋಟಿ ವೆಚ್ಚದಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಕಬ್ಬಿಣ ಉತ್ಪಾಧನೆ ಸಾಮಾರ್ಥ್ಯದ ಘಟಕದ ನಿರ್ಮಾಣಕ್ಕೆ ಸಿದ್ದತೆ ಜೋರಾಗಿ ನಡೆಸಿದೆ. ಈಗಾಗಲೇ ಅನೇಕ ವರ್ಷಗಳ ಹಿಂದೆಯೇ 1034 ಎಕರೆ ಭೂಮಿಯನ್ನು ಕಂಪನಿ ರೈತರಿಂದ ಪಡೆದಿದ್ದು, ಇದೀಗ ಘಟಕ ಆರಂಭದ ಕೆಲಸ ಆರಂಭಿಸಿದೆ. ಆದ್ರೆ ಇದೀಗ ಕಾಮಗಾರಿ ನಡೆಸದಂತೆ ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ.
ಸಿಎಂ ಭೇಟಿಯಾದ ಕೊಪ್ಪಳದ ನಿಯೋಗ
ಕಳೆದ ಪೆಬ್ರವರಿ 24 ರಂದು ಗವಿಸಿದ್ದೇಶ್ವ ಸ್ವಾಮೀಜಿ ನೇತೃತ್ವದಲ್ಲಿ ಬಂದ್ ಆಚರಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತ ಗವಿಮಠದ ಸ್ವಾಮೀಜಿ ಕೂಡಾ, ಯಾವುದೇ ಕಾರಣಕ್ಕೂ ಪ್ಯಾಕ್ಟರಿ ಆರಂಭಕ್ಕೆ ಸರ್ಕಾರ ಅವಕಾಶ ನೀಡಬಾರದು ಅಂತ ಹೇಳಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಂದು, ಕೊಪ್ಪಳ ಜಿಲ್ಲೆಯ ಸರ್ವಪಕ್ಷಗಳ ಶಾಸಕರು, ಮಾಜಿ ಶಾಸಕರು,ಅನೇಕ ಮುಖಂಡರು ಸಿಎಂ ಬೇಟಿ ಮಾಡಿದ್ರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಜನಾರ್ದನ ರೆಡ್ಡಿ, ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ಸಿಎಂ ರನ್ನು ಬೇಟಿಯಾಗಿ ಪ್ಟಾಕ್ಟರಿ ಆರಂಭಕ್ಕೆ ಅವಕಾಶ ನೀಡಬಾರದು ಅಂತ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಕೂಡಾ ಸ್ಪಂದಿಸಿದ್ದಾರೆ.
ನಿಯೋಗದ ಮುಂದೆಯೇ ಕೊಪ್ಪಳ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿದ್ದರಾಮ್ಯಯ, ಪ್ಯಾಕ್ಟರಿ ಕಾಮಗಾರಿ ಆರಂಭವಾಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಈಗಾಗಲೇ ಗವಿಮಠದ ಸ್ವಾಮೀಜಿ ಸೇರಿದಂತೆ ಕೊಪ್ಪಳ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಯಾವುದೇ ರೀತಿಯ ಪರವಾನಗಿ ನೀಡೋದಿಲ್ಲಾ ಅಂತ ಸಿಎಂ ಹೇಳಿದ್ದಾರಂತೆ. ಇನ್ನು ಪ್ಯಾಕ್ಟರಿಯವರು ಕಾನೂನು ಮೊರೆಹೋದ್ರೆ, ಕಾನೂನು ಹೋರಾಟ ನಡೆಸಲು ಸಿದ್ದರಾಗಿ ಅಂತ ನಿಯೋಗದಲ್ಲಿದ್ದವರಿಗೆ ಹೇಳಿದ್ದಾರೆ. ಇನ್ನು ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದ ಸಿಎಂ ಕ್ರಮಕ್ಕೆ ಶಾಸಕ ಜನಾರ್ಧನ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಎಂಗೆ ಅಭಿನಂದನೆ ಹೇಳಿದ್ದಾರೆ.
ಫ್ಯಾಕ್ಟರಿಗೆ ವಿರೋಧ ಏಕೆ?
ಕಳೆದ ತಿಂಗಳು ನಡೆದಿರೋ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೂಡಾ ಸರ್ಕಾರ ಮತ್ತು ಕಂಪನಿ ಒಡಬಂಡಿಕೆಗೆ ಸಹಿ ಹಾಕಿವೆ. ಆದ್ರೆ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಬೃಹತ್ ಸ್ಟೀಲ್ ಪ್ಯಾಕ್ಟರಿ ಆರಂಭಕ್ಕೆ ಕೊಪ್ಪಳ ಜನರು ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇರೋ ಮೂವತ್ತಕ್ಕೂ ಹೆಚ್ಚು ಸ್ಟೀಲ್ ಪ್ಯಾಕ್ಟರಿಗಳಿಂದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜನರು ಕೊಪ್ಪಳ ಬಿಟ್ಟು ಬೇರಡೆ ಹೋಗಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ಯಾಕ್ಟರಿ ಆರಂಭವಾಗಬಾರದು ಅಂತ ಹೇಳುತ್ತಿದ್ದಾರೆ.
ಕೊಪ್ಪಳದ ಜನರ ತೀರ್ವ ವಿರೋಧದ ನಡುವೆ ಪ್ಯಾಕ್ಟರಿಯಲ್ಲಿ ಕಾಮಗಾರಿ ಜೋರಾಗಿತ್ತು. ಆದ್ರೆ ಇದೀಗ ಸಿಎಂ ಸೂಚನೆ ನೀಡಿದ್ದರಿಂದ, ಪ್ಯಾಕ್ಟರಿ ಆರಂಭಕ್ಕೆ ಸದ್ಯ ಬ್ರೇಕ್ ಬಿದ್ದಂತಾಗಿದೆ. ಆದ್ರೆ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ, ಪ್ಯಾಕ್ಟರಿಯವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನು ಕಾಲವೇ ಉತ್ತರಿಸಲಿದೆ.