ನವದೆಹಲಿ(ಫೆ.16) ಕಾಂಗ್ರೆಸ್ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಆದಾಯ ತೆರಿಗೆ ಇಲಾಖೆ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಆರಂಭಿಸಿತ್ತು. ಇದು ಪ್ರಜಾಪ್ರಭುತ್ವವನ್ನೇ ಫ್ರೀಜ್ ಮಾಡಿದ್ದಕ್ಕೆ ಸಮ ಎಂದು ಕಾಂಗ್ರೆಸ್ ನೇರವಾಗಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿತ್ತು. ಪ್ರಜಾಪ್ರಭುತ್ವದ ಮೇಲೆ ದಾಳಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬೆಳವಣಿಗೆ ನಡುವೆ ಆದಾಯ ತೆರಿಗೆ ಇಲಾಖೆ ವಿಚಾರಣೆ ಬಳಿಕ ಇದೀಗ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸಕ್ರಿಯ ಮಾಡಲಾಗಿದೆ. ಮುಂದಿನ ವಿಚಾರಣೆ ವರೆಗೆ ಕಾಂಗ್ರೆಸ್ ಬ್ಯಾಂಕ್ ಖಾತೆಗಳು ಅನ್ಲಾಕ್ ಆಗಲಿದೆ.
ಕಾಂಗ್ರೆಸ್ ಖಾತೆಯಲ್ಲಿ 14 ಲಕ್ಷ ರೂಪಾಯಿ ನಗದು ವಹಿವಾಟು ಹಾಗೂ 2018-19ರ ವಿಳಂಬ ತೆರಿಗೆ ಪಾವತಿ ಕಾರಣದಿಂದ ಆದಾಯ ತೆರಿಗೆ ಇಲಾಖೆ ಫೆಬ್ರವರಿ 14 ರಂದು ಕಾಂಗ್ರೆಸ್ ಕಾತೆಯನ್ನು ಫ್ರೀಜ್ ಮಾಡಿತ್ತು. ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡಿದ್ದರು. ಇದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿತ್ತು.
ಇತ್ತ ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆ ಹಾಗೂ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮನವಿ ಸಲ್ಲಿಸಿತ್ತು. ಇತ್ತ ಕಾಂಗ್ರೆಸ್ ಮೆಲ್ಮನವಿ ಹಾಗೂ ಕಾಂಗ್ರೆಸ್ ಬ್ಯಾಂಕ್ ಖಾತೆಗಳ ವಿಚಾರಣೆ ಬಳಿಕ ಕೆಲ ನಿರ್ಬಂಧದೊಂದಿದೆ ಬ್ಯಾಂಕ್ ಖಾತೆಗಳನ್ನು ಅನ್ಲಾಕ್ ಮಾಡಲಾಗಿದೆ. ಆದರೆ ಖಾತೆಗಳು ಆದಾಯ ತೆರಿಗೆ ಇಲಾಖೆ ವಿಚಾರಣೆ ಅಡಿಯಲ್ಲಿರಲಿದೆ. ಸದ್ಯಕ್ಕೆ ಕಾಂಗ್ರೆಸ್ಗೆ ಸಿಕ್ಕಿರುವುದು ಮದ್ಯಂತರ ರಿಲೀಫ್ ಆಗಿದ್ದು, ಆದಾಯ ತೆರಿಗೆ ಇಲಾಖೆ ವಿಚಾರಣೆ ಮುಂದುವರಿಯಲಿದೆ.
ಬ್ಯಾಂಕ್ ಖಾತೆ ಫ್ರೀಜ್ ಮಾಹಿತಿಯನ್ನು ಖುದ್ದು ನಾಯಕ ಅಜಯ್ ಮಾಕೆನ್ ಸುದ್ದಿಗೋಷ್ಠಿ ಮೂಲಕ ಬಹಿರಂಗಪಡಿಸಿದ್ದರು. ಕ್ರೌಡ್ ಫಂಡಿಂಗ್ ಮೂಲಕ ಪಕ್ಷ ದೇಣಿಗೆ ಸಂಗ್ರಹಿಸಿದೆ. ಈ ಹಣಗಳನ್ನು ಬಿಜೆಪಿ ಸರ್ಕಾರ ಫ್ರೀಜ್ ಮಾಡಿದೆ. ಶಾಸಕರು, ಸಂಸದರು, ನಾಯಕರು, ಕಾರ್ಯಕರ್ತರು, ಬೆಂಬಲಿಗರ ಕ್ರೌಡ್ ಫಂಡಿಂಗ್ ಮೂಲಕ ಕಾಂಗ್ರೆಸ್ ಆರ್ಥಿಕ ಕ್ರೋಢಿಕರಣ ಮಾಡಿದೆ. ಕಾಂಗ್ರೆಸ್ ಹಾಗೂ ಯೂಥ್ ಕಾಂಗ್ರೆಸ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಮಾಕೆನ್ ಹೇಳಿದ್ದಾರೆ.
ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಅಕ್ರಮವಾಗಿ ಹಣ ಸಂಗ್ರಹ ಮಾಡಿದೆ. ನಾವು ಕ್ರೌಡ್ ಫಂಡಿಂಗ್ ಮೂಲಕ ಕಾಂಗ್ರೆಸ್ ನ್ಯಾಯಸಮ್ಮತವಾಗಿ ಹಣ ಸಂಗ್ರಹಿಸಿದೆ. ಆದರೆ ಬಿಜೆಪಿ ಲೋಕಸಭಾ ಚುನಾವಣೆ ಸಮೀಪದಲ್ಲಿ ಪಕ್ಷದ ಖಾತೆ ಫ್ರೀಜ್ ಮಾಡಿ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದರು.