ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀ ರಾಮ್ ಎಂದು ಕೂಗಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು ಜೈ ಭೀಮ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.
ಅದಲ್ಲದೆ ಇಂದು ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸದನ ಆರಂಭಕ್ಕೂ ಮುನ್ನವೇ ಸದನದ ಒಳಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಜೈ ಶ್ರೀ ರಾಮ್ ಘೋಷಣೆ ಕೂಗಿದರು.
ಅಧಿವೇಶನದ ಮೊದಲ ದಿನದವಾದ ಇಂದು ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾಷಣ ಮುಗಿಸಿ ರಾಜ್ಯಪಾಲರು ಜೈ ಹಿಂದ್, ಜೈ ಕರ್ನಾಟಕ, ಧನ್ಯವಾದ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು. ಅಷ್ಟರಲ್ಲಿ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್. ಕೆ.ಪಾಟೀಲ್ ಅವರು ಸಭೆಯಿಂದ ನಿರ್ಗಮಿಸಿದರು.
ರಾಜ್ಯಪಾಲರು ತೆರಳುವವರೆಗೂ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರಾದ ಸಂತೋಷ್ ಲಾಡ್, ಬೈರತಿ ಸುರೇಶ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಇತರ ಕಾಂಗ್ರೆಸ್ ಶಾಸಕರು ‘ಜೈ ಭೀಮ್, ಜೈ ಸಂವಿಧಾನ’ ಎಂದು ಘೋಷಣೆ ಕೂಗಿದರು.
ಇನ್ನು ಎನ್ ಡಿ ಎ ಮೈತ್ರಿ ಜೆಡಿಎಸ್ ಸದಸ್ಯರು ಯಾವುದೇ ಘೋಷಣೆ ಕೂಗದೆ ತಟಸ್ಥವಾಗಿ ಉಳಿದರು. ಮಂಡ್ಯದಲ್ಲಿ ಕೆರಗೋಡು ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೇಸರಿ ತೊಟ್ಟಿದ್ದು ಚರ್ಚೆಗೆ ಗ್ರಾಮವಾಗಿತ್ತು. ಈ ವೇಳೆ ಜೆಡಿಎಸ್ ವರಿಷ್ಠರೂ ಅಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೇಸರಿ ಶಾಲು ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಆ ಬಳಿಕ ಜೆಡಿಎಸ್ ಕೂಡ ಕೆಸರಿ ಶಾಲು ವಿವಾದದಿಂದ ದೂರ ಉಳಿದಿತ್ತು. ಸೋಮವಾರ ಸಹ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಕೇಸರಿ ತೊಟ್ಟರೂ ಜೆಡಿಎಸ್ ಸದಸ್ಯರು ಕೇಸರಿಯಿಂದ ಅಂತರ ಕಾಯ್ದುಕೊಂಡಿರುವುದು ಕಂಡು ಬಂದಿತ್ತು.
ಇದಕ್ಕೂ ಮುನ್ನ ವಿಧಾನ ಮಂಡಲದ ಜಂಟಿ ಅವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಂಪ್ರದಾಯದಂತೆ ಸ್ವಾಗತಿಸಲಾಯಿತು.
ರಾಜಭವನದಿಂದ ವಿಶೇಷ ವಾಹನದಲ್ಲಿ ಆಗಮಿಸಿದ ಅವರನ್ನು ಶಿಷ್ಟಾಚಾರದಂತೆ ಶಾಸಕರ ಭವನ ಪ್ರವೇಶಿಸುವ ಗೇಟ್ ಬಳಿ ಅಶ್ವದಳದ ಮೂಲಕ ಬರ ಮಾಡಿಕೊಳ್ಳಲಾಯಿತು.
ನಂತರ ವಿಧಾನಸೌಧ ಮುಂಭಾಗ ಆಗಮಿಸಿದ ರಾಜ್ಯಪಾಲರನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೂಗುಚ್ಛ ನೀಡಿ ಬರಮಾಡಿಕೊಂಡರು.
ಬಳಿಕ ವಿಧಾನಸಭೆ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ಸಂಪ್ರದಾಯದಂತೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಸದನದ ಸದಸ್ಯರೆಲ್ಲರೂ ಎದ್ದು ನಿಂತು ರಾಜ್ಯಪಾಲರಿಗೆ ಸ್ವಾಗತ ಕೋರಿದರು.