ಬೆಂಗಳೂರು: ಪರಿಶಿಷ್ಟ ಜಾತಿಗಳ (ಎಸ್ಸಿ) ಸುಮಾರು ಮೂರು ದಶಕಗಳ ಒಳ ಮೀಸಲು ಹಕ್ಕೊತ್ತಾಯ, ನಿರೀಕ್ಷೆ ಕೊನೆಗೂ ಸಾಕಾರಗೊಂಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ವರ್ಗೀಕರಣ ಮಾಡಿ ಲಭ್ಯವಿರುವ ಒಟ್ಟು ಶೇ.17 ಎಸ್ಸಿ ಮೀಸಲು ಪ್ರಮಾಣವನ್ನು ಬಲಗೈ (ಛಲವಾದಿ) ಶೇ.6, ಎಡಗೈ (ಮಾದಿಗ) ಶೇ.6 ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ.5 ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ತೆಲಂಗಾಣ ಬಳಿಕ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಜಾರಿ ಮಾಡಿದ 2ನೇ ರಾಜ್ಯ ಕರ್ನಾಟಕವಾಗಿದೆ. ಜತೆಗೆ ಪರಿಶಿಷ್ಟರಿಗೆ ‘ಒಳ ಮೀಸಲು ಗ್ಯಾರಂಟಿ’ಯನ್ನೂ ನೀಡಿದಂತಾಗಿದೆ.
ನ್ಯಾ.ನಾಗಮೋಹನದಾಸ್ ಏಕಸದಸ್ಯ ಆಯೋಗವು ಕಳೆದ ಆ.4 ರಂದು ಸಲ್ಲಿಸಿದ್ದ ವರದಿಯಲ್ಲಿಪರಿಶಿಷ್ಟ 101 ಜಾತಿಗಳನ್ನು 5 ವರ್ಗೀಕರಣ ಮಾಡಿ ಮೀಸಲು ಹಂಚಿಕೆ ಮಾಡಿತ್ತು. ಈ ವರದಿ ಶಿಫಾರಸು ಆಧರಿಸಿ ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿವಿಶೇಷ ಸಂಪುಟ ಸಭೆಯಲ್ಲಿಸುದೀರ್ಘವಾಗಿ ಚರ್ಚಿಸಿ, ಜಾತಿಗಳ ವರ್ಗೀಕರಣವನ್ನು ಮೂರಕ್ಕೆ ಕುಗ್ಗಿಸಲಾಯಿತು.
ಯಾವ ವರ್ಗಕ್ಕೆ ಏನು ಲಾಭ?
– ಮೂರು ವರ್ಗೀಕರಣದಿಂದ ಎಡಗೈಗೆ ಬಲ
ಒಳಮೀಸಲಿಗೆ ಪ್ರಮುಖ ಹಕ್ಕುದಾರರಾಗಿದ್ದ ಪರಿಶಿಷ್ಟ ಎಡಗೈ (ಮಾದಿಗ) ವರ್ಗೀಕರಣದಲ್ಲಿ18 ಜಾತಿಗಳನ್ನು ತರಲಾಗಿದೆ. ಈ ವರ್ಗೀಕರಣದಲ್ಲಿಒಟ್ಟು ಜನಸಂಖ್ಯೆ 36,69,246 (ಶೇ.34.91). ಈ ವರ್ಗಕ್ಕೆ ನ್ಯಾ. ನಾಗಮೋಹನದಾಸ್ ಆಯೋಗದ ಶಿಫಾರಸ್ಸಿನಂತೆ ಶೇ.6 ಮೀಸಲು ಪ್ರಮಾಣವನ್ನು ಕಲ್ಪಿಸಲಾಗಿದೆ.
– ಬಲಗೈಗೆ ಸಮಾಧಾನ
ಪರಿಶಿಷ್ಟ ಬಲಗೈ (ಛಲವಾದಿ) ಸಮುದಾಯಕ್ಕೆ ನ್ಯಾ.ನಾಗಮೋಹನದಾಸ್ ಆಯೋಗ ಶಿಫಾರಸ್ಸು ಮಾಡಿದ್ದ ಶೇ.5 ಮೀಸಲನ್ನು ಶೇ.6 ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ, ಆಯೋಗವು ಶೇ.1 ಮೀಸಲು ಪ್ರಮಾಣ ನಿಗದಿಯೊಂದಿಗೆ 5ನೇ ಪ್ರವರ್ಗದಲ್ಲಿಗುರುತಿಸಿದ್ದ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಈ ಮೂರು ಜಾತಿಗಳನ್ನು ಬಲಗೈ ವರ್ಗೀಕರಣಕ್ಕೆ ಸೇರ್ಪಡೆ ಮಾಡಲಾಗಿದೆ. ಬಲಗೈ ಪ್ರವರ್ಗದಲ್ಲಿಗುರುತಿಸಲಾಗಿರುವ 17 ಉಪಜಾತಿಗಳ ಗುಂಪಿಗೆ ಈ ಮೂರು ಜಾತಿಗಳನ್ನೂ ತರಲಾಗಿದೆ.
– ಸ್ಪೃಶ್ಯ ಜಾತಿಗಳಿಗೆ ತುಸು ಕಡಿಮೆ
ಪರಿಶಿಷ್ಟರಲ್ಲೇ ಸ್ಪೃಶ್ಯ ಜಾತಿಗಳಾಗಿ ಗುರುತಿಸಿಕೊಂಡಿರುವ ಲಂಬಾಣಿ, ಭೋವಿ, ಕೊರಮ, ಕೊರಚ ಈ ನಾಲ್ಕು ಜಾತಿಗಳಿಗೆ ಶೇ.4 ಮೀಸಲು ಪ್ರಮಾಣವನ್ನು ನ್ಯಾ. ನಾಗಮೋಹನದಾಸ್ ಆಯೋಗ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟರಲ್ಲಿ28,34,939 ಜನಸಂಖ್ಯೆ (ಶೇ.26.97) ಇದೆ ಎಂದು ಗುರುತಿಸಲಾದ ಈ ಪ್ರವರ್ಗಕ್ಕೆ 59 ಸಣ್ಣ ಜಾತಿಗಳನ್ನು ಸೇರ್ಪಡೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ. ಅಂದರೆ, ಒಟ್ಟು 5,22,099 (ಶೇ.4.97) ಜನಸಂಖ್ಯೆ ಇರುವ ಈ ಸಮುದಾಯಗಳಿಗೆ ನ್ಯಾ.ನಾಗಮೋಹನದಾಸ್ ನಿಗದಿ ಮಾಡಿದ್ದ ಶೇ.1 ಮೀಸಲನ್ನು ಇದಕ್ಕೆ ಸೇರಿಸಿ ಶೇ.5 ನಿಗದಿ ಮಾಡಲಾಗಿದೆ.
ಸಂಪುಟಕ್ಕೆ ಇಲಾಖೆ ಪ್ರಸ್ತಾವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಯಲ್ಲಿಒಳ ಮೀಸಲಾತಿ ಕಲ್ಪಿಸುವುದು ಸೂಕ್ತ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಗೆ ಇಲಾಖೆ ಸಲ್ಲಿಸಿರುವ ರಹಸ್ಯ ಟಿಪ್ಪಣಿಯಲ್ಲಿಈ ಬಗ್ಗೆ ಉಲ್ಲೇಖವಿತ್ತುಎಂದು ತಿಳಿದುಬಂದಿದೆ.