ಬಳ್ಳಾರಿ,ಜೂ.16 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂ.21 ರಂದು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳುವುದಾಗಿ ತಿಳಿದು ಬಂದಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಅಗತ್ಯ ಮಾಹಿತಿಯೊಂದಿಗೆ ಸಿದ್ಧರಿರಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ನ ನಜೀರ್ಸಾಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂ.21 ರಂದು ಸಿಎಂ ಸಿದ್ಧರಾಮಯ್ಯನವರು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಮಾಹಿತಿ ಲಭಿಸಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಪ್ರಗತಿ ಮಾಹಿತಿ, ಕಾಮಗಾರಿಗಳ ಸ್ಥಿತಿಗತಿ ಹಾಗೂ ಇತರೆ ಸಮಗ್ರ ವಿವರಗಳನ್ನು ಸಿದ್ಧತೆಯಲ್ಲಿಟ್ಟುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಉದ್ಭವಿಸಿದ ಬರ ನಿರ್ವಹಣೆಯ ಕ್ರಮ, ಬೆಳೆ ವಿಮೆ, ಬರ ಪರಿಹಾರ ಹಾಗೂ ಪ್ರಸ್ತುತ ಸಾಲಿನ ಮಳೆ ವಿವರ, ರಸಗೊಬ್ಬರ, ಬಿತ್ತನೆ ಬೀಜಗಳ ದಾಸ್ತಾನು ಹಾಗೂ ವಿವಿಧ ಯೋಜನೆಗಳ ಮಾಹಿತಿ ಸಮರ್ಪಕವಾಗಿ ಒದಗಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಮೇವಿನ ಲಭ್ಯತೆ, ರಾಸುಗಳ ಆರೋಗ್ಯ ಸ್ಥಿತಿ-ಗತಿ, ಬೆಳವಣಿಗೆ ಕ್ರಮ, ಹಾಲು ಉತ್ಪಾದನೆ ಹಾಗೂ ಇತರೆ ಮಾಹಿತಿ ಬಗ್ಗೆ ವಿಚಾರಿಸುವರು. ಈ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ಪಶು ಮತ್ತು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮ, ಶಾಲೆಗಳ ಸ್ಥಿತಿ-ಗತಿ, ಗುಣಮಟ್ಟದ ಶಿಕ್ಷಣದ ಕುರಿತಾಗಿ ಅನುಷ್ಠಾನಗೊಳಿಸಿದ ರೂಪು-ರೇಷೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿನ ವಸತಿ ಶಾಲೆಗಳಿಗೆ ಭೇಟಿ ನೀಡಬೇಕು. ಅಲ್ಲಿನ ಗುಣಮಟ್ಟದ ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಿಸಬೇಕು. ಯಾವುದೇ ದೂರು ಉಲ್ಲೇಖವಾಗಬಾರದು ಎಂದು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ, ರಾಜಕಾಲುವೆಯ ಸ್ವಚ್ಛತೆ, ಕಸ ವಿಲೇವಾರಿ ಪರಿಕ್ರಮ, ರಸ್ತೆಗಳ ಸ್ವಚ್ಛತೆ ಕುರಿತು ಕಾರ್ಯೋನ್ಮುಖರಾಗುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿದರು.
ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆಯ ಕ್ರಮನಿರ್ವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಜನತಾದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾದ ದೂರುಗಳಿದ್ದಲ್ಲಿ ಕೂಡಲೇ ಬಗಹರಿಸಲು ಕ್ರಮವಹಿಸಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪ್ರಗತಿ ಮತ್ತು ಅವುಗಳ ಅನುಷ್ಠಾನದ ಮಾಹಿತಿಯನ್ನು ಸಂಬಂಧಿಸಿದ ಐದು ಇಲಾಖೆಗಳು ಪೂರಕ ಮಾಹಿತಿಯೊಂದಿಗೆ ಸಿದ್ಧತೆಯಲ್ಲಿರಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲ್ಲೂಕು ಮಟ್ಟದಲ್ಲಿ ಸಮಸ್ಯೆ ಕಂಡುಬಂದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಪ್ರಗತಿ ಪರಿಶೀಲನಾ ಸಭೆಯ ದಿನದಂದು ಯಾವೊಬ್ಬ ಅಧಿಕಾರಿಯೂ ಗೈರು ಹಾಜರಾದರೇ ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಯಾವುದೇ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ಅಗತ್ಯ ಸಹಕಾರ ಬೇಕಾದಲ್ಲಿ ಇತರೆ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು ಎಂದರು.
ದೈನಂದಿನ ಪತ್ರಿಕೆಗಳಲ್ಲಿ ವರದಿಯಾಗುವ ತಮ್ಮ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಯಾ ಸಾಲಿನ ಯೋಜನೆಗಳ ಕಾರ್ಯಪ್ರಗತಿ ವಿವರ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.