ಬಳ್ಳಾರಿ,ಮೇ 21 : ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನಲೆಯಲ್ಲಿ ಮಳೆ ಹಾನಿಯಿಂದಾಗಿ ಸಂಭವಿಸಬಹುದಾದ ಅವಘಡಗಳನ್ನು ನಿಭಾಯಿಸಲು ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು, ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲ್ಲೂಕು ತಹಶೀಲ್ದಾರರೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರಂಭಿಕ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು, ಪೂರಕವಾಗಿ ಆರೋಗ್ಯ ಇಲಾಖೆಯು ಪ್ರತಿ ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದಕ್ಕೆ ಸ್ಥಳೀಯ-ಸಂಸ್ಥೆಗಳು ಕೈಜೋಡಿಸಬೇಕು ಎಂದು ಸೂಚಿಸಿದರು.
ಮಳೆಯಿಂದಾಗುವ ಮನೆಹಾನಿ ಮತ್ತು ಗುಡುಗು-ಸಿಡಿಲಿನಿಂದ ಜನ-ಜಾನುವಾರು ಪ್ರಾಣಹಾನಿ ತಡೆಗಟ್ಟಲು ಜಾಗೃತಿ ಮೂಡಿಸಬೇಕು, ಅಲ್ಲದೆ ಮಳೆ, ಸಿಡಿಲಿನಿಂದ ಉಂಟಾಗುವ ಯಾವುದೇ ಹಾನಿ ವರದಿಯನ್ನು ತ್ವರಿತವಾಗಿ ಸಲ್ಲಿಸಲು ಅಧಿಕಾರಿಗಳನ್ನು ನಿಯೋಜಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ವರದಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸಮರ್ಪಕವಾಗಿ ಸರಬರಾಜು ಮಾಡಬೇಕು. ಈ ಬಾರಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಾನಿ ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದು ವರದಿಯಾಗುತ್ತಿದ್ದು, ವಿದ್ಯುತ್ ಅವಘಡ ಉಂಟಾಗದಂತೆ ನಿಗಾವಹಿಸಬೇಕು. ಸಾರ್ವಜನಿಕರು ವಿದ್ಯುತ್ಗೆ ಸಂಬಂಧಿಸಿದಂತೆ ದೂರುಗಳಿಗೆ ಕರೆ ಮಾಡಿದಲ್ಲಿ ತಕ್ಷಣವೇ ಸ್ಪಂದಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಹಾಗೂ ಇತರೆ ಚರಂಡಿ ಮಾರ್ಗಗಳನ್ನು ಸ್ವಚ್ಛಗೊಳಿಸಲು ಕೂಡಲೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಹಲವು ಸಮನ್ವಯ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹೇಮಂತ್.ಎನ್., ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್, ಡಿಹೆಚ್ಓ ಡಾ.ವೈ.ರಮೇಶ್ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರರು ಹಾಗೂ ಇತರರು ಉಪಸ್ಥಿತರಿದ್ದರು.