ಬಳ್ಳಾರಿ,ಮಾ.07 : ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಅಂತರರಾಜ್ಯ ಗಡಿಭಾಗದ ಹಳ್ಳಿಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾವಹಿಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಚ್ರ್ಯುವಲ್ ಮೂಲಕ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 72 ಹಳ್ಳಿಗಳು ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಿಗೆ ಗಡಿಭಾಗವನ್ನು ಹಂಚಿಕೊಂಡಿದ್ದು, ಹಳ್ಳಿಗಳ ರಸ್ತೆ ಮೂಲಕ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆಗಳ ಹಿನ್ನಲೆಯಲ್ಲಿ ಸಕಾಲಕ್ಕೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಜಿಲ್ಲೆಯ ಗಡಿಭಾಗದಲ್ಲಿ 23 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿದ್ದು, ದಾಖಲೆಗಳಿಲ್ಲದೇ ಹಣ ಸಾಗಾಣೆ, ಮದ್ಯ, ಉಡುಗೋರೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗುತ್ತಿದ್ದು, ಸಕಾಲಕ್ಕೆ ಮಾಹಿತಿ ನೀಡಿದರೆ ತಡೆಯಲು ಸಾಧ್ಯವಾಗುತ್ತದೆ ಎಂದರು.
ಅಂತರರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಗಡಿಭಾಗದ ಪೊಲೀಸ್ ಠಾಣೆಗಳ ಎಲ್ಲಾ ಹಂತದ ಅಧಿಕಾರಿಗಳು ವ್ಯಾಟ್ಸ್ಆಪ್ ಗ್ರೂಪ್ ರಚಿಸಿಕೊಂಡು ನಿತ್ಯವೂ ಬೆಳವಣಿಗೆಗಳ ಮಾಹಿತಿ ನೀಡಬೇಕು. ಅಕ್ರಮವಾದ ಮತ್ತು ಅನುಮಾನಸ್ಪದ ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಬೇಕು ಎಂದರು.
ಚುನಾವಣೆಯನ್ನು ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಗಡಿಭಾಗದ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಹಕಾರ ಅವಶ್ಯಕತೆಯಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಆಕ್ರಮ ಹಣ, ಮದ್ಯ, ಬೆಲೆಬಾಳುವ ವಸ್ತುಗಳ ಸಾಗಾಣೆಯ ಮಾಹಿತಿಯನ್ನು ಕ್ರೋಢಿಕರಿಸಲು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿರುವಂತಹ ಎನ್.ಬಿ.ಡಬ್ಲ್ಯೂ ವ್ಯಕ್ತಿಗಳು, ರೌಡಿಶೀಟರ್ಗಳು, ಸಂಶಯುತ ಗಲಭೆ ಮಾಡುವಂತಹ ವ್ಯಕ್ತಿಗಳು ಮತ್ತು ಗಡಿ ಭಾಗದ ಗ್ರಾಮಗಳಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಗಡಿ ತಪಾಸಣೆ ಚೆಕ್ಪೋಸ್ಟ್ಗಳಲ್ಲಿ ನಿರ್ವಹಿಸುವ ಬಗ್ಗೆ ಪರಸ್ಪರ ಸಹಕಾರ ಮತ್ತು ಮಾಹಿತಿಗಳ ವಿನಿಮಯ ಮಾಡಿಕೊಳ್ಳಬೇಕು ಎಂದು ಕೋರಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಸಹಾಯಕ ಆಯುಕ್ತರಾದ ಹೇಮಂತ್ಕುಮಾರ್.ಎನ್, ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಸೇರಿದಂತೆ ಅನಂತಪುರ, ಕರ್ನೂಲ್ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಿದ್ದರು.