ಬಳ್ಳಾರಿ,ಮಾ.18 : ಲೋಕಸಭೆ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಳೆದ ಎರಡು ದಿನಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 430.96 ಲೀಟರ್ (ರೂ.1,28,202 ಬೆಲೆ) ಮದ್ಯ ಮತ್ತು ಸೂಕ್ತ ದಾಖಲೆ (ಇ-ವೇ ಬಿಲ್) ಇಲ್ಲದ 10,160 ಕೆಜಿ (ರೂ.15,13,840 ಮೌಲ್ಯದ) ಒಣ ಮೆಣಸಿನಕಾಯಿ, 5 ವಾಹನಗಳನ್ನು ವಶಪಡಿಸಿಕೊಂಡು 24 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಪ್ರವೃತ್ತವಾಗಿದೆ. 16 ಫ್ಲೈಯಿಂಗ್ ಸÁ್ಕ್ವ್ಯಡ್, 24 ಎಸ್ಎಸ್ಟಿ ತಂಡ ಮತ್ತು 7 ಅಬಕಾರಿ ತಂಡ ಕಾರ್ಯ ನಿರ್ವಹಿಸುತ್ತಿವೆ.
ಶನಿವಾರದಂದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಿಂದ 107.21 ಲೀಟರ್ (9349 ರೂ. ಬೆಲೆ) ಮದ್ಯ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿಯವರಿಂದ ಸೂಕ್ತ ದಾಖಲೆಯಿಲ್ಲದ (ಇ-ವೇ ಬಿಲ್) 10,160 ಕೆಜಿ (15,13,840 ರೂ. ಮೌಲ್ಯ) ಒಣಮೆಣಸಿನಕಾಯಿ, 3 ವಾಹನಗಳನ್ನು (ರೂ.95 ಸಾವಿರ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು 19 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಭಾನುವಾರದಂದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಿಂದ 323.75 ಲೀಟರ್ (118853 ರೂ. ಬೆಲೆ) ಮದ್ಯ ಮತ್ತು 2 ವಾಹನ (ರೂ.2,50,000 ಬೆಲೆ) ಜಪ್ತಿ ಮಾಡಲಾಗಿದೆ. ಒಟ್ಟು 4 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.