ಬೆಂಗಳೂರು,ಜ,೦೮: ಸಿನಿಮಾ ಸಕ್ಸಸ್ ಪಾರ್ಟಿಯನ್ನು ಅವಧಿ ಮೀರಿ ಬೆಳಗಿನ ಜಾವದವರೆಗೆ ಮಾಡಿದ ಹಿನ್ನೆಲೆಯಲ್ಲಿ ಚಾಲೆಂಜಿAಗ್ ಸ್ಟಾರ್ ದರ್ಶನ್ ಸೇರಿ ೮ ಮಂದಿಗೆ ಹಾಗೂ ಕರ್ತವ್ಯಲೋಪವೆಸಗಿದ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯ ಪೊಲೀಸರ ವಿರುದ್ಧ ಬೆಂಗಳೂರು ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಎಫ್ಐಆರ್ ದಾಖಲಿಸಿರುವ ಪ್ರತಿಯನ್ನು ತೋರಿಸಿದರು. ಅಲ್ಲದೆ ಚಿತ್ರತಂಡಕ್ಕೆ ನೀಡಿರುವ ನೊಟೀಸ್ ಮತ್ತು ಅದರ ಬಗ್ಗೆ ತನಿಖೆ ನಡೆಸುವಂತೆ ಮಲ್ಲೇಶ್ವರಂ ಎಸಿಪಿಗೆ ಸೂಚಿಸಲಾಗಿದೆ ಎಂದರು. ಜನವರಿ ೩ರಂದು ರಾತ್ರಿಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಸುಬ್ರಹ್ಮಣ್ಯ ನಗರ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ವರು ಕಾನ್ ಸ್ಟೇಬಲ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಎಫ್ಐಆರ್ನಲ್ಲಿರುವುದೇನು?: ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ ೧೦ ಗಂಟೆಯಿAದ ರಾತ್ರಿ ೧ ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ. ಆದರೆ ಜಟ್ಲಾಗ್ ರೆಸ್ಟೋಬಾರ್ ಈ ನಿಮಯಮ ಉಲ್ಲಂಘಿಸಿ ಬೆಳಗಿನ ಜಾವ ೩.೩೦ರವರೆಗೂ ಪಾರ್ಟಿ ಮಾಡಲು ಸೆಲೆಬ್ರಿಟಿಗಳಿಗೆ ಅವಕಾಶ ಕೊಟ್ಟಿತ್ತು. ರೆಸ್ಟೋಬಾರ್ ಬೆಳಗ್ಗಿನ ಜಾವ ೩ ಗಂಟೆಯಾದರೂ ತೆಗೆದೇ ಇದ್ದ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್ಲಾಗ್ ರೆಸ್ಟೋಬಾರ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಕೂಡಲೇ ಬಾರ್ ಕ್ಲೋಸ್ ಮಾಡಿಸಿ ೩.೩೦ರ ಸುಮಾರಿಗೆ ಜೆಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನು ಮನೆಗೆ ಕಳುಹಿಸಿದ್ದರು.
ಜನವರಿ ೪ರ ಬೆಳಗಿನ ಜಾವದವರೆಗೆ ಪಾರ್ಟಿ ಹೇಗೆ ನಡೆಯಿತು ಎಂಬುದರ ಕುರಿತು ವಿವರಗಳನ್ನು ಒದಗಿಸುವಂತೆ ಪೊಲೀಸರನ್ನು ಕೇಳಲಾಗಿದೆ. ಜೆಟ್ ಲ್ಯಾಗ್ ಪಬ್ಗೆ ಏಕೆ ತಡವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು ಎಂದು ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಡಿಸಿಪಿ ಸೈದುಲ್ ಅದಾವತ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂಬ ವಿವರಣೆ ನೀಡುವಂತೆ ಪೊಲೀಸರನ್ನೂ ಕೇಳಲಾಗಿದೆ.
ಇತ್ತೀಚೆಗೆ ತೆರೆಕಂಡ ಕನ್ನಡದ ಸೂಪರ್ಹಿಟ್ ಸಿನಿಮಾ ‘ಕಾಟೇರ’ ತಂಡ ಈ ಸಕ್ಸಸ್ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿ ಚಾಲೆಂಜಿAಗ್ ಸ್ಟಾರ್ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಜನಪ್ರಿಯ ನಾಯಕ ನಟರಾದ ಧನಂಜಯ್, ಅಭಿಷೇಕ್ ಅಂಬರೀಶ್ ಮತ್ತು ಇತರರು ಬೆಳಗಿನ ಜಾವದವರೆಗೂ ಪಾರ್ಟಿಯನ್ನು ಮುಂದುವರಿಸಿದ್ದರು.