ತಮಿಳಿನ ಸ್ಟಾರ್ ನಟ ಧನುಶ್ ಏಳು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ಅವರ ನಿರ್ದೇಶನದಲ್ಲಿ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ.
ನಟ ಧನುಶ್ (Dhanush) ತಮಿಳು ಚಿತ್ರರಂಗದ ಸ್ಟಾರ್ ನಟ. ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೂಪರ್ ಹಿಟ್ ನೀಡಿದ್ದಾರೆ. ಅವರ ನಟನಾ ಪ್ರತಿಭೆಗೆ ಹಾಲಿವುಡ್ ಅವಕಾಶಗಳು ಬಂದಿವೆ. ಹಾಲಿವುಡ್ನ ಖ್ಯಾತ ನಟರುಗಳೊಟ್ಟಿಗೆ ಸಿನಿಮಾ ಮಾಡಿ ಬಂದಿದ್ದಾರೆ. ಈಗಲೂ ಧನುಶ್ ಕೈಯಲ್ಲಿ ಸಾಲು-ಸಾಲು ಸಿನಿಮಾಗಳಿವೆ. ಇದೆಲ್ಲದರ ನಡುವೆ ಧನುಶ್, ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹಾಗೆಂದು ಧನುಶ್ ಸಿನಿಮಾ ನಿರ್ದೇಶಿಸುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಿನಿಮಾ ನಿರ್ದೇಶನ ಮಾಡಿ ಯಶಸ್ವಿಯಾಗಿದ್ದರು. ಈಗ ಮತ್ತೊಮ್ಮೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಧನುಶ್, ‘ರಾಯನ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಸ್ವತಃ ನಾಯಕರಾಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಪೋಸ್ಟರ್ ನೋಡಿದವರಿಗೆ ಇದು ಮೂವರು ಅಣ್ಣ-ತಮ್ಮಂದಿರ ಕತೆ ಇರಬಹುದೆಂಬ ಅನುಮಾನ ಮೂಡಿದೆ. ‘ರಾಯನ್’ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ ಎಂಬುದನ್ನು ಪೋಸ್ಟರ್ ಸಾರಿ ಹೇಳುತ್ತಿದೆ. ತಳ್ಳುಗಾಡಿ ಹೋಟೆಲ್ ನಡೆಸುತ್ತಿರುವ ಮೂವರು ಯುವಕರು ಅಥವಾ ಅಣ್ಣ ತಮ್ಮಂದಿರು ಹೇಗೆ ಅವರ ಮೇಲಾಗುತ್ತಿರುವ ದೌರ್ಜನ್ಯವನ್ನು ಮೆಟ್ಟಿ ನಿಲ್ಲುತ್ತಾರೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಸಿನಿಮಾಕ್ಕೆ ‘ಜೈಲರ್’ ನಿರ್ಮಾಪಕ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಕತೆ, ಚಿತ್ರಕತೆಯನ್ನು ಸ್ವತಃ ಧನುಶ್ ಅವರೇ ಬರೆದಿದ್ದಾರೆ.
ಧನುಶ್ ಈ ಹಿಂದೆ ‘ಪಾ ಪಾಂಡಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಕನ್ನಡದಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಹೆಸರಿನಲ್ಲಿ ರೀಮೇಕ್ ಮಾಡಲಾಯ್ತು. ಧನುಶ್ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಸುದೀಪ್ ಮಾಡಿದ್ದರು, ಅಂಬರೀಶ್ ನಿರ್ವಹಿಸಿದ್ದ ಪಾತ್ರದಲ್ಲಿ ರಾಜ್ ಕಿರಣ್ ನಟಿಸಿದ್ದರು. ‘ಪಾ ಪಾಂಡಿ’ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಬಳಿಕ ಧನುಶ್ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಏಳು ವರ್ಷಗಳ ಗ್ಯಾಪ್ ಬಳಿಕ ಈಗ ‘ರಾಯನ್’ ಸಿನಿಮಾ ಮೂಲಕ ಮತ್ತೊಮ್ಮೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಇದೇ ವರ್ಷವೇ ಮತ್ತೊಂದು ಸಿನಿಮಾ ಸಹ ನಿರ್ದೇಶನ ಮಾಡುತ್ತಿದ್ದಾರೆ ಧನುಷ್. ‘ನಿಲವಕ್ಕು ಎನ್ ಮೇಲ್ ಎನ್ನಡಿ ಕೊಲಮ್’ ಹೆಸರಿನ ಸಿನಿಮಾವನ್ನು ಧನುಶ್ ನಿರ್ದೇಶಿಸುತ್ತಿದ್ದು ಇದೊಂದು ಹಾಸ್ಯಮಯ ಪ್ರೇಮಕಥೆಯಾಗಿದೆ. ಸಿನಿಮಾದಲ್ಲಿ ಧನುಶ್ ನಟಿಸುತ್ತಿಲ್ಲ. ನಿರ್ದೇಶನದ ಜೊತೆಗೆ ಈ ಸಿನಿಮಾಕ್ಕೆ ಬಂಡವಾಳವನ್ನೂ ಸಹ ಧನುಶ್ ಹೂಡುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷದ ಅಂತ್ಯಕ್ಕೆ ಬಿಡುಗಡೆ ಆಗಲಿದೆ.