ಬಳ್ಳಾರಿ,ಮೇ 23 : ಮುಂಗಾರು ಪೂರ್ವ ಮಳೆ ಆರಂಭದ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯ ಸುತ್ತಲು ನೀರು ನಿಲ್ಲದಂತೆ ಮಾಡುವುದು, ನೀರಿನ ಸಂಗ್ರಾಹಕಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಮತ್ತು ಚರಂಡಿಗಳಲ್ಲಿ ಕಸಕಡ್ಡಿಗಳನ್ನು ಹಾಕದಂತೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಂಡಲ್ಲಿ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ತಿಳಿಸಿದರು.
ಇಂದು ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುಶಲೋಪರಿ ವಿಚಾರಿಸಿ ಮಾತನಾಡಿಸಿದ ಅವರು, ಮಳೆ ನೀರು ಮನೆಯ ಸುತ್ತಲು ಹಾಗೂ ಮನೆಯ ಮೇಲ್ಭಾಗದಲ್ಲಿ, ಹೂವಿನ ಕುಂಡಗಳಲ್ಲಿ, ಟಿನ್, ಪ್ಲಾಸ್ಟಿಕ್ ಕಪ್ ಮುಂತಾದವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ನೀರು ಸಂಗ್ರಾಹಕಗಳಾದ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಮಡಿಕೆ ಮುಂತಾದವುಗಳನ್ನು ನೀರು ತುಂಬಿಸುವ ಪೂರ್ವದಲ್ಲಿ ಚೆನ್ನಾಗಿ ತೊಳೆದು ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆ ನಿಯಂತ್ರಣವನ್ನು ಕೈಗೊಳ್ಳಬೇಕು ಎಂದು ವಿನಂತಿಸಿದರು.
ಮಾನ್ಸುನ್ ಮಳೆಯ ಆರಂಭಿಕ ಹಿನ್ನಲೆ ಮಳೆ, ಗುಡುಗು-ಮಿಂಚು ಸಹಿತ ಬರುವುದರಿಂದ ಬಯಲಿನಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು, ಇದರಿಂದ ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮರಗಳಿದ್ದ ಪ್ರದೇಶದಲ್ಲಿ ಇದ್ದರೆ ಆದಷ್ಟು ಅಲ್ಲಿಂದ ಬೇಗನೆ ಹೊರಬರುವುದು ಉತ್ತಮ ಎಂದು ಮನವರಿಕೆ ಮಾಡಿದರು.
ಮಳೆಯ ಹಿನ್ನಲೆಯಲ್ಲಿ ನೀರಿನ ಮೂಲಗಳಿಗೆ ಹೊಸ ನೀರು ಬರುವುದರಿಂದ ಆಕಸ್ಮಿಕವಾಗಿ ಶುದ್ಧಿಕರಿಸದೇ ಇರುವ ನೀರನ್ನು ಕುಡಿಯಬಾರದು, ವಾಂತಿ ಬೇಧಿ ಉಂಟಾಗುವ ಸಾದ್ಯತೆಗಳು ಇರುತ್ತವೆ. ಕ್ಲೋರಿನೇಷನ್ ಕೈಗೊಂಡು ಶುದ್ಧಿಕರೀಸಿದ ಕುಡಿಯುವ ನೀರನ್ನು ಹಾಗೂ ಶುದ್ದೀಕರಣ ಘಟಕದ ನೀರನ್ನು ಕುಡಿಯಬೇಕು. ಸಾಧ್ಯವಿದ್ದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳಬೇಕು ಎಂದು ಡಿಹೆಚ್ಓ ಅವರು ತಿಳಿಸಿದರು.
ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲಾ ಅಗತ್ಯ ಔಷಧಿಗಳ ದಾಸ್ತಾನು ಇರಿಸಲಾಗಿದ್ದು, ಯಾರು ಆತಂಕಕ್ಕೆ ಒಳಗಾಗದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದು ವಿನಂತಿಸಿದರು.
ಬಳಿಕ ಸಿಬ್ಬಂದಿಯವರೊಂದಿಗೆ ಚರ್ಚಿಸಿದ ಡಿಹೆಚ್ಒ ಡಾ.ವೈ.ರಮೇಶ್ಬಾಬು ಅವರು, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನಾನುಕೂಲತೆ ಉಂಟಾಗದಂತೆ ನಿಗದಿತ ಸಮಯದಲ್ಲಿ ಒ.ಪಿ.ಡಿ ಚೀಟಿ ಒದಗಿಸಬೇಕು. ವೈದ್ಯರ ಕೊಠಡಿ ಬಳಿ ರೋಗಿಗಳು ಕುಳಿತುಕೊಳ್ಳಲು ಆಸನಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರಲ್ಲದೇ, ವಾರ್ಡ್ಗಳಲ್ಲಿ ರೋಗಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ನಿಗಾವಹಿಸುವ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಗುಣಮುಖರಾಗಿ ಮನೆಗೆ ಹಿಂತಿರುಗುವಂತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಭರತ್, ವೈದ್ಯಾಧಿಕಾರಿ ಡಾ.ಕಿರಣ್ ಸೇರಿದಂತೆ ಶುಶ್ರೂಷಕರು ಹಾಗೂ ಇತರರು ಇದ್ದರು.