ಬಳ್ಳಾರಿ,ಸೆ.06 : ಮಳೆಯಿಂದ ಜಿಲ್ಲೆಯಾದ್ಯಂತ ವಾತಾವರಣ ಬದಲಾಣೆಯಿಂದ ಸಾಮಾನ್ಯ ಜ್ವರ ಪ್ರಕರಣಗಳು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಅಗತ್ಯ ಔಷಧಿಗಳನ್ನು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ದಸ್ತಾನು ಇಡಲಾಗಿದೆ. ಸಾರ್ವಜನಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲೆಯಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನಲೆಯಲ್ಲಿ ಶನಿವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ದಾಖಲಾದ ರೋಗಿಗಳ ಯೋಗಕ್ಷೇಮ ಮತ್ತು ಆರೋಗ್ಯ ವಿಚಾರಿಸಿ ಮಾತನಾಡಿದರು.
ಮಳೆ ಬಂದಿರುವ ಹಿನ್ನಲೆಯಲ್ಲಿ ವೈರಸ್ಗಳು ಸಾಮಾನ್ಯವಾಗಿದ್ದು, ಶೀತ ತಾಪಮಾನದಲ್ಲಿಯೂ ಸಹ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾರ್ವಜನಿಕರು ಪೌಷ್ಟಿಕ ಮತ್ತು ಬೆಚ್ಚಗಿನ ಆಹಾರ ಸೇವಿಸಬೇಕು ಎಂದು ನಿರ್ದೇಶನ ನೀಡಿದರು.
ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ವೈರಲ್ ಕಾಯಿಲೆಗಳನ್ನು ಎದುರಿಸಲು ಆರೋಗ್ಯಕರ ಜೀವಸತ್ವವುಳ್ಳ ಆಹಾರ ಸೇವಿಸಬೇಕು. ಕಲುಷಿತ ನೀರನ್ನು ಕುಡಿವುದನ್ನು ತಪ್ಪಿಸಬೇಕು. ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಶುಶೂಷ್ರಕ ಅಧೀಕ್ಷಕಿ ವಿಮಲಾ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.