ಮನೆಯಿಂದ ಹೊರಡುವ ಮುನ್ನ ವಿಜಯ್ ಪ್ರಕಾಶ್ ಪತ್ರ ಬರೆದಿಟ್ಟಿದ್ದರು. ‘ನಾನು ಮನೆ ಬಿಟ್ಟು ಹೋಗುತ್ತಿರುವುದು ಯಾವುದೋ ದುರುದ್ದೇಶಕ್ಕೆ ಅಲ್ಲ. ನನ್ನ ಜೀವನ ನೋಡಿಕೊಂಡು ಹೊರಡುತ್ತಿದ್ದೇನೆ. ಒಂದಲ್ಲ ಒಂದು ದಿನ ಸಾಧಿಸುತ್ತೇನೆ ಎನ್ನುವ ನಂಬಿಕೆ ನನ್ನಲ್ಲಿ ಇದೆ. ನನಗಾಗಿ ಪ್ರಾರ್ಥಿಸಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ’ ಎಂದು ಪತ್ರದಲ್ಲಿ ಅವರು ಬರೆದಿದ್ದರು.
ವಿಜಯ್ ಪ್ರಕಾಶ್ (Vijay Prakash) ಅವರಿಗೆ ಇಂದು (ಫೆಬ್ರವರಿ 21) ಬರ್ತ್ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಕನ್ನಡ ಸೇರಿ ಹಲವು ಭಾಷೆಯಲ್ಲಿ ನೂರಾರು ಹಾಡುಗಳನ್ನು ಅವರು ಹಾಡಿದ್ದಾರೆ. ‘ಗೊಂಬೆ ಹೇಳುತೈತೆ..’, ‘ತುಂಡೈಕ್ಳ ಸಹವಾಸ..’ ಸೇರಿ ಅನೇಕ ಹಾಡುಗಳು ಅವರ ಧ್ವನಿಯಲ್ಲಿ ಮೂಡಿ ಬಂದಿವೆ. ಈ ಹಾಡುಗಳು ಈಗಲೂ ಜನರ ಫೇವರಿಟ್ ಸಾಂಗ್ ಎನಿಸಿಕೊಂಡಿದೆ. ವಿಜಯ್ ಪ್ರಕಾಶ್ ಅವರ ಧ್ವನಿ ಅನೇಕರಿಗೆ ಇಷ್ಟ ಆಗುತ್ತದೆ. ವಿಜಯ್ ಪ್ರಕಾಶ್ ಇಷ್ಟೊಂದು ಜನಪ್ರಿಯತೆ ಪಡೆಯುವುದರ ಹಿಂದೆ ಸಾಕಷ್ಟು ಶ್ರಮ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ವಿಜಯ್ ಪ್ರಕಾಶ್ ಅವರು ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಹಲವರಿಗೆ ಬಣ್ಣದ ಲೋಕದ ಜರ್ನಿ ಸುಲಭವಾಗಿರುತ್ತದೆ. ಆದರೆ, ವಿಜಯ್ ಪ್ರಕಾಶ್ಗೆ ಈ ದಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರು ತಮ್ಮದೇ ಹಾದಿಯನ್ನು ಸೃಷ್ಟಿಸಿಕೊಂಡರು. ‘ನನ್ನ ಪಯಣದ ಬಗ್ಗೆ ಯೋಚಿಸಿದರೆ ಎಲ್ಲಾ ರೀತಿಯ ಅನುಭವ ಆಗಿದೆ. ಅವತ್ತಿನ ದಿನ ನೆನಪಿಸಿಕೊಂಡರೆ ಅಚ್ಚರಿ ಎನಿಸುತ್ತದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾನು ಅತಿಥಿ ಅನ್ನೋದೆ ನನಗೆ ಹೆಮ್ಮೆ. ಈ ಪಯಣ ಅದ್ಭುತವಾಗಿತ್ತು’ ಎಂದಿದ್ದರು ವಿಜಯ್ ಪ್ರಕಾಶ್.
‘ನನಗೆ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಇತ್ತು. ಇಂಜಿನಿಯರಿಂಗ್ ಸೇರಿದೆ. ನಾನು ಕ್ಲಾಸ್ಗೆ ಹೋಗುತ್ತಿದ್ದೆ. ಆದರೆ, ಮನಸ್ಸು ಸ್ಥಿಮಿತದಲ್ಲಿ ಇರುತ್ತಿರಲಿಲ್ಲ. ಗಮನವೇ ಇರುತ್ತಿರಲಿಲ್ಲ. ಇಂಜಿನಿಯರ್ ಆಗಿ ಬದುಕೋಕೆ ಆಗಲ್ಲ ಅನಿಸುತ್ತಿತ್ತು. ನಾನು ಏನದರೂ ಮಾಡಬೇಕು ಎಂದು ಅನಿಸುತ್ತಲೇ ಇರುತ್ತಿತ್ತು. ಆಗ ಅಪ್ಪ ಅಮ್ಮನಿಗೆ ಹೇಳದೆ 700 ರೂಪಾಯಿಯೊಂದಿಗೆ ರಾತ್ರಿ ಮನೆಯಿಂದ ಹೊರಟೆ. ಎಲ್ಲಿಗೆ ಹೋಗಬೇಕು ಎಂದು ಗೊತ್ತಿರಲಿಲ್ಲ. ಏಕೆ ಹೋಗಬೇಕು ಎಂದು ಗೊತ್ತಿರಲಿಲ್ಲ. ಆದರೆ, ಛಲ ಇತ್ತು. ಆದರೆ, ಮಾರ್ಗದರ್ಶನ ಇರಲಿಲ್ಲ’ ಎಂದಿದ್ದಾರೆ ಅವರು.
ಪತ್ರ ಬರೆದಿಟ್ಟಿದ್ದರು..
ಮನೆಯಿಂದ ಹೊರಡುವ ಮುನ್ನ ಅವರು ಪತ್ರ ಬರೆದಿಟ್ಟಿದ್ದರು. ‘ನಾನು ಮನೆ ಬಿಟ್ಟು ಹೋಗುತ್ತಿರುವುದು ಯಾವುದೋ ದುರುದ್ದೇಶಕ್ಕಲ್ಲ. ನನ್ನ ಜೀವನ ನೋಡಿಕೊಂಡು ಹೊರಡುತ್ತಿದ್ದೇನೆ. ಒಂದಲ್ಲ ಒಂದು ದಿನ ಸಾಧಿಸುತ್ತೇನೆ ಎನ್ನುವ ನಂಬಿಕೆ ಇದೆ. ನನಗಾಗಿ ಪ್ರಾರ್ಥಿಸಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ’ ಎಂದು ಪತ್ರದಲ್ಲಿ ಇತ್ತು.
ಹೋಗಿದ್ದೆಲ್ಲಿಗೆ?
‘ಬೆಂಗಳೂರಲ್ಲಿ ತಿರುಪತಿ ಬಸ್ ನೋಡಿದೆ. ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿದೆ. ಅಣ್ಣಾವ್ರು ಹೇಳಿದ ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ ಹಾಡು ನೆನಪಾಯಿತು. ಯಾವುದೋ ಒಂದು ಬಲ ಇದೆ ಅನಿಸಿತು. ಅಲ್ಲಿಂದ ಪ್ರತಿ ವರ್ಷ ತಿರುಪತಿ ದರ್ಶನ ಮಾಡುತ್ತಿದ್ದೇನೆ. ಅಂದು ತಿರುಪತಿಯಿಂದ ಮುಂಬೈgಎ ಹೋದೆ. ಏಕೆ ಹೋದೆ ಎಂಬುದು ಗೊತ್ತಿರಲಿಲ್ಲ. ಅಲ್ಲಿ ಯಾರೂ ಗೊತ್ತಿರಲಿಲ್ಲ. ಕೈಯಲ್ಲಿರೋ ಹಣ ಸ್ವಲ್ಪ ಖರ್ಚಾಗಿತ್ತು. ಸ್ಟ್ರೆಸ್ ಆಗಿದ್ದೆ. ಉಡುಪಿ ರೆಸ್ಟೋರೆಂಟ್ನಲ್ಲಿ ಪಲಾವ್ ತಿಂದೆ. ಅವತ್ತು ತಿಂದವನು ಹೋಟೆಲ್ ಹೋಗಲೇ ಇಲ್ಲ. ಎರಡು ಮೂರು ದಿನದಲ್ಲಿ ಎಲ್ಲವೂ ಖಾಲಿ ಆಯಿತು. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕುಳಿತು ಮೂರ್ನಾಲ್ಕು ದಿನ ಕಳೆದೆ’ ಎಂದಿದ್ದಾರೆ ವಿಜಯ್ ಪ್ರಕಾಶ್.
‘ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದಾಗ ಪೊಲೀಸರು ಒದೆಯುತ್ತಿದ್ದರು. ಆಗ ಮನಸ್ಸಲ್ಲಿ ಹೋಗೋದಾ, ಇರೋದಾ ಎನಿಸುತ್ತಿತ್ತು. ಇಲ್ಲೇ ಇರೋಣ ಎಂದು ಉಳಿದುಕೊಂಡೆ. ಹುಡುಕಿಕೊಂಡು ಹೋಗಿ ಆನಂದ್ ಮಿಲಿಂದ್ ಅಂತ ಮ್ಯೂಸಿಕ್ ಡೈರೆಕ್ಟರ್ ಮನೆಗೆ ಹೋದೆ. ಅವರ ಮ್ಯಾನೇಜರ್ ಒಂದು ಅಡ್ರೆಸ್ ಕೊಟ್ಟರು. ಸುರೇಶ್ ವಾಡ್ಕರ್ ಮ್ಯೂಸಿಕ್ ಸಂಸ್ಥೆಗೆ ಹೋದೆ. ಅಲ್ಲಿ ತು ಹೀರೇ ಹಾಡನ್ನು ಹಾಡಿದೆ. ಅವರಿಗೆ ಖುಷಿ ಆಯಿತು. ಅವರು ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಿದರು. ದೇವಸ್ಥಾನದಲ್ಲಿ ಉಳಿದುಕೊಳ್ಳೋಕೆ ವ್ಯವಸ್ಥೆ ಆಯಿತು’ ಎಂದಿದ್ದರು ವಿಜಯ್.
ಸುರೇಶ್ ಬಳಿ ತೆರಳುವುದಕ್ಕೂ ಮೊದಲು ವಿಜಯ್ ಪ್ರಕಾಶ್ ಅವರ ಬಳಿ ಇದ್ದಿದ್ದು ಒಂದೇ ಶರ್ಟ್ ಆಗಿತ್ತು. ಅದನ್ನೇ ಬೀಚ್ನಲ್ಲಿ ಒಗೆದು ಹಾಕಿಕೊಳ್ಳುತ್ತಿದ್ದರು. ರೈಲ್ವೆ ನಿಲ್ದಾಣದಲ್ಲಿ ಸಮಯ ಕಳೆಯುತ್ತಿದ್ದರು. ಸುರೇಶ್ ಅವರಿಂದ ದೇವಸ್ಥಾನದಲ್ಲಿ ಉಳಿಯೋಕೆ ವ್ಯವಸ್ಥೆ ಆಗಿತ್ತು. ತಿಂಗಳಿಗೆ 200 ರೂಪಾಯಿ ಕೊಡಬೇಕಿತ್ತು. 25-30 ಜನಕ್ಕೆ ಇದ್ದಿದ್ದು ಒಂದೇ ಬಾತ್ರೂಂ.
‘ಸ್ವಲ್ಪ ದಿನ ಬಿಟ್ಟು ಸುರೇಶ್ ಮನೆಗೆ ಹೋದಾಗ ಅವರು ನನ್ನನ್ನು ನೋಡಿ ಶಾಕ್ ಆದರು. ಅವರು 100 ರೂಪಾಯಿ ಕೊಟ್ಟು ತಿಂದುಕೊಂಡು ಬಾ ಅಂದರು. ಹೋಗಿ ತಿಂದುಕೊಂಡು ಬಂದೆ. ಅಲ್ಲಿಂದ ಬದುಕು ಬದಲಾಯಿತು. ಅವರು ದೇವರಂಥ ಮನುಷ್ಯರು’ ಎಂದು ಮಾಹಿತಿ ಹಂಚಿಕೊಂಡಿದ್ದರು ವಿಜಯ್ ಪ್ರಕಾಶ್.
‘ಎರಡು ಮೂರು ದಿನ ಆದ್ಮೇಲೆ ಸುರೇಶ್ ಅವರು ಒಂದು ರೆಕಾರ್ಡಿಂಗ್ ಇದೆ ಹೋಗ್ತೀಯಾ ಅಂತ ಕೇಳಿದ್ರು. ಹೋಗಿ ಬಂದೆ. ಕೆಲಾಕ್ಸ್ ಜಾಹೀರಾತು ಅದು. ಆಗ 2700 ರೂಪಾಯಿ ಚೆಕ್ ಕೊಟ್ರು. ಹೋಗಿ ವಿತ್ಡ್ರಾ ಮಾಡಿಕೊಂಡು ಬಂದೆ. ನಾಳೆ ಮತ್ತೆ ಬನ್ನಿ ಎರಡು ರೆಕಾರ್ಡಿಂಗ್ ಇದೆ ಎಂದರು. ಆಗ ಜಾಹೀರಾತು ಲೋಕದಲ್ಲಿ ಕಂಫರ್ಟ್ ಆದೆ. ನಂತರ ಸರೆಗಮಪ ಹಿಂದಿ ಸೀಸನ್ಗೆ ಹೋದೆ. ಹಲವು ಜಿಂಗಲ್ ಹಾಡಿಸಿದರು. ನಾನು ಎಲ್ಲಾ ಭಾಷೆಯಲ್ಲಿ ವಾಯ್ಸೋವರ್ ಕೊಡೋಕೆ ಶುರುಮಾಡಿದೆ. ನಂತರ ಬಂದಿದ್ದನ್ನು ಎಂಜಾಯ್ ಮಾಡಿಕೊಂಡು ಹೋಗುತ್ತಾ ಬಂದೆ’ ಎಂದರು ಅವರು. ಅಲ್ಲಿಂದ ಅವರ ಬದುಕು ಸಂಪೂರ್ಣ ಬದಲಾಗಿದೆ.