ಬಳ್ಳಾರಿ,ಫೆ.03: ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ”ವು ಅತ್ಯಂತ ಅದ್ದೂರಿಯಾಗಿ ಸಂಭ್ರಮದಿಂದ ನಡೆಯುತ್ತಿದ್ದು, ಶುಕ್ರವಾರವೂ ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ, ಕೊರ್ಲಗುಂದಿ, ಹಂದಿಹಾಳು, ವಣೇನೂರು, ಬಸರಕೋಡು ಮತ್ತು ಚಾನಾಳು ಮಾರ್ಗವಾಗಿ ಸಂಚರಿಸಿತು.
ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಸಂವಿಧಾನ ಜಾಗೃತಿ ಜಾಥಾವನ್ನು ಬಳ್ಳಾರಿ ತಾಲ್ಲೂಕಿನ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿಯೂ ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು, ತಮಟೆ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.
ಸಂವಿಧಾನ ಜಾಗೃತಿ ಜಾಥಾವು ಕೊರ್ಲಗುಂದಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿರುವುದು ಅತೀವ ಸಂತೋಷ ತಂದಿದೆ ಎಂದು ಕೊರ್ಲಗುಂದಿ ಗ್ರಾಮದಲ್ಲಿ ಮಂಜುಳಾ ಅವರು ಸಂತಸ ವ್ಯಕ್ತಪಡಿಸಿದರು.
ವಣೇನೂರು ಗ್ರಾಮದ ಶಿಕ್ಷಕಿ ಸ್ಮಿತಾ ಅವರು ಮಾತನಾಡಿ, ಸಂವಿಧಾನ ಜಾಗೃತಿ ಜಾಥಾವು ನಮ್ಮೂರಿಗೆ ಬಂದಿರುವುದು ಅತ್ಯಂತ ಸಂತೋಷಕರ ಹಾಗೂ ಹಬ್ಬದ ವಾತಾವರಣ ಮೂಡಿಸಿದೆ. ಸರ್ಕಾರದಿಂದ ಮೂಡಿಬರುತ್ತಿರುವ ಈ ಕಾರ್ಯಕ್ರಮವು ಅತ್ಯುತ್ತಮವಾಗಿದೆ ಎಂದರು.
ವಣೇನೂರು ಗ್ರಾಮಸ್ಥರಾದ ದಾಮೋದರ ಅವರು ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರವರಿಂದ ರಚಿತವಾದ ಸಂವಿಧಾನದ ಬಗ್ಗೆ ಅರಿಯಲು ಈ ಜಾಥಾವು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಣೇನೂರು ಗ್ರಾಮದ ಪದವಿ ವಿದ್ಯಾರ್ಥಿ ಹನುಮಂತ ಅವರು ಮಾತನಾಡಿ, ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕಾನೂನಾತ್ಮಕವಾಗಿ ಎಲ್ಲರೂ ಸಮಾನವಾಗಿ ಅನುಭವಿಸಲು ಕಾರಣವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳು ನೆನೆಯಬೇಕಾದ ಮಹಾನ್ ನೇತಾರರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ.ಮಮತಾ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಹಾಜರಿದ್ದರು.