ಬಳ್ಳಾರಿ ಜುಲೈ 25 : ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನೀಡಲಾಗುವ ವಾರ್ಷಿಕ ಮತ್ತು ಜೀವಮಾನದ ಸಾಧನೆ ಸೇರಿದಂತೆ ಇತರ ಪ್ರಶಸ್ತಿಗಳ ಆಯ್ಕೆಯಲ್ಲಿ ಬಳ್ಳಾರಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗಿದೆ ಇದು ನಾಟಕ ಅಕಾಡೆಮಿಯ ಬಳ್ಳಾರಿ ಜಿಲ್ಲೆಯ ಬಗ್ಗೆ ಹೊಂದಿರುವ ನಿರ್ಲಕ್ಷ ಧೋರಣೆಯಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ವಿರುದ್ಧ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಅಸಮಾಧಾನವನ್ನು ವ್ಯಕ್ತಪಡಿಸಿತು.
ಇಂದು ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾದ ಎಲ್ಲನಗೌಡ ಶಂಕರ ಬಂಡೆ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಬಳ್ಳಾರಿ ಜಿಲ್ಲೆಗೆ ಗಂಡು ಮೆಟ್ಟಿನ ನಾಡು , ಕಲಾವಿದರ ಜಿಲ್ಲೆ ಎಂದು ಹೆಸರುವಾಸಿಯಾಗಿದೆ ಇಂಥ ಜಿಲ್ಲೆಯಲ್ಲಿ ಕಳಗಣಿಸಿರುವುದು ನಾಟಕ ಅಕಾಡೆಮಿಯ ತಾರತಮ್ಯ ಧೋರಣೆಯನ್ನು ತೋರಿಸುತ್ತದೆ ಎಂದು ಅಕಾಡೆಮಿ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯ ಮತ್ತು ಜಿಲ್ಲೆಯ ಕಲಾವಿದರ ಬಗ್ಗೆ ಇಲ್ಲಿನ ರಾಜಕಾರಣಿಗಳು ಹೊಂದಿರುವ ತಾತ್ಸಾರ ಮನೋಭಾವನೆ ಕೂಡ ಕಾರಣವಾಗಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಸಂಗಡಿಗೆ ಅವರ ತವರು ಜಿಲ್ಲೆಗೆ ಎರಡೆರಡು ಪ್ರಶಸ್ತಿಗಳನ್ನು ನೀಡಲಾಗಿದೆ, ಜಿಲ್ಲೆಯ ಶಾಸಕರು ಮಾಜಿ ಸಚಿವರು ಕೂಡಲೇ ಈ ವಿಷಯದ ಬಗ್ಗೆ ಗಮನಹರಿಸಿ ಬಳ್ಳಾರಿ ಜಿಲ್ಲೆಯ ಕಲಾವಿದರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಮನವಿ ಮಾಡಿದರು. ರಮಣಪ್ಪ ಭಜಂತ್ರಿ, ಸುಬ್ಬಣ್ಣಹಚ್ಚೋಳ್ಳಿ ಅಮರೇಶ್, ಚಿಗುರು ಹುಲುಗಪ್ಪ ಹುಲುಗಪ್ಪ, ವೃತ್ತಿ ರಂಗಭೂಮಿ ಕಲಾವಿದರಾದ ಜಯಶ್ರೀ ಪಾಟೀಲ್ ಸೇರಿದಂತೆ ಇತರರಿದ್ದರು.