ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನಲ್ಲಿ ಬರೋಬ್ಬರಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾ ಮೂಲದ ರೋಜ್ಲೈಮ್ (40) ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದೇಶಿ ಮಹಿಳೆ ಜೂಲಿಯೆಟ್ ಎಂಬಾಕೆ ಮುಂಬೈನಿಂದ ಆಹಾರ ಧಾನ್ಯದ ಜೊತೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳಿಗೆ ಮತ್ತು ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಳು. ಈಕೆಯಿಂದ ಡ್ರಗ್ಸ್ ಪಡೆದು ರೋಜ್ಲೈಮ್ ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ಅಂಗಡಿಯಲ್ಲಿಟ್ಟು ಮಾರುತ್ತಿದ್ದಳು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಅಂಗಡಿ ಬಳಿ ತೆರಳಿದ್ದರು. ಇದೇ ವೇಳೆ, ರೋಜ್ಲೈಮ್ ಡ್ರಗ್ಸ್ ಹಂಚತ್ತಿದ್ದಳು. ಅಲರ್ಟ್ ಆದ ಸಿಸಿಬಿ ಪೊಲೀಸರು ರೋಜ್ಲೈಮ್ಳನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು, ದೆಹಲಿಯಿಂದ ಡ್ರಗ್ಸ್ ತಂದಿದ್ದ ಜೂಲಿಯೆಟ್ ಎಂಬಾಕೆ ಪರಾರಿಯಾಗಿದ್ದಾಳೆ.
ಆರೋಪಿ ರೋಜ್ಲೈಮ್ ಬಳಿ ಇದ್ದ 12 ಕೆಜಿ ತೂಕದ ಬಿಳಿ, ಹಳದಿ ಬಣ್ಣದ ಎಂಡಿಎಂಎ ಕ್ರಿಸ್ಟಲ್ ಮತ್ತು 70 ಸಿಮ್ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ಜೂಲಿಯೆಟ್ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.
ಇನ್ನು, ರೋಜ್ಲೈಮ್ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಳು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.