ಬಳ್ಳಾರಿ,ಆ. 4 : ಈ ಕಥಾ ಸಂಕಲನದಲ್ಲಿ ಕಥೆಗಳನ್ನು ಓದುತ್ತಾ ಹೋದಾಗ ಅಲಕ್ಷಿತ ಸಮುದಾಯದ ಸಂಕಥನವೊಂದು ವಿಶಿಷ್ಟವಾಗಿ ತೆರೆದುಕೊಂಡಂತೆ ಭಾಸವಾಗುತ್ತಿದೆ ಎಂದು ಮೋಕಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಕಲಾವತಿಯವರು ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಜಯ ಬುಕ್ಸ್ ಜಂಟಿಯಾಗಿ ಆಯೋಜಿಸಿದ್ದ ‘ ವೀರೇಂದ್ರ ರಾವಿಹಾಳ್ ಅವರ ಡಂಕಲ್ ಪೇಟೆ ಕಥಾ ಸಂಕಲನದ ಹೊಸ ಓದು ವಿನೂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಥೆ ದುಃಖಕ್ಕೆ ಹೊರತು ಸುಖಕ್ಕೆ ಅಲ್ಲ ಕತೆಗಾರನ ಹೆಚ್ಚುಗಾರಿಕೆ ಇರುವುದನ್ನು ಇದ್ದ ಹಾಗೆ ಹೇಳುವುದು ಅಲ್ಲ , ಇರದೇ ಇರುವುದನ್ನು ರೂಪಕನಿಷ್ಠವಾಗಿ ಹೇಳುವುದರಲ್ಲಿ ಸ್ವಾರಸ್ಯವಿರುತ್ತದೆ ಎಂದರು.
ಕಥೆಗಳುದ್ದಕ್ಕೂ ಸಹಬಾಳ್ವೆ, ಸಾಮರಸ್ಯದ ಅಂಶಗಳಿವೆ ವೀರೇಂದ್ರ ಒಬ್ಬ ಲೇಖಕನಿಗೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆಯನ್ನು ಇಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ ಇದು ಶ್ಲಾಘನೀಯ ಎಂದರು.
ಸಂವಾದದಲ್ಲಿ ಭಾಗವಹಿಸಿದ್ದ ಸಂಶೋಧಕ ಡಾ. ನಾಗರಾಜ್ ಬಸರಕೋಡು, ಇಲ್ಲಿನ ಕಥೆಗಳ ಭಾಷಾ ಸೊಗಡು ಮತ್ತು ವಸ್ತುಗಳು ಆಪ್ತವಾಗಿವೆ. ಮುಖವಾಡಗಳ ಜಗತ್ತನ್ನು ಬಯಲು ಮಾಡುವಲ್ಲಿ ಇಲ್ಲಿನ ಕಥೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ಕೆ .ಆರ್ .ವೀಣಾ ಎರ್ರಿಗೌಡ ಮಾತನಾಡುತ್ತಾ ಇಲ್ಲಿನ ಕಥೆಗಳಲ್ಲಿ ಸಾಮಾನ್ಯ ಮನುಷ್ಯನ ಸೂಕ್ಷ್ಮ ವೇದನೆಗಳು ಹೆಚ್ಚು ಮುನ್ನೆಲೆಗೆ ಬಂದಿವೆ ಎಂದರು.
ರಾವಿಹಾಳರ ಕಥೆಗಳಲ್ಲಿ ಗ್ರಾಮೀಣ ಲೋಕದ ಜನಜೀವನ ಸಂಸ್ಕೃತಿ , ವಿಶಿಷ್ಟವಾಗಿ ಮೈದಾಳಿದೆ ಎಂದು ಸಂವಾದಕಿಕೆ ಲತಾ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಇಂತಹ ಕಾರ್ಯಕ್ರಮಗಳ ಆ ಯೋಜನೆಯಿಂದ ಲೇಖಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಲೇಖಕರ ಕೃತಿಗಳ ಒಳನೋಟ, ಆಶಯಗಳನ್ನು ಪರಿಚಯಿಸುವ ಕೆಲಸ ಹೊಸ ಓದು ಸರಣಿಯದ್ಧಾಗಿದೆ ಎಂದರು.
ವೇದಿಕೆ ಮೇಲೆ ವಿಜಯ ಬುಕ್ಸ್ ನ ಪ್ರಕಾಶಕರಾದ ಜಯಶ್ರೀ ರಾವಿಹಾಳ್. ಲೇಖಕ ವೀರೇಂದ್ರ ರಾವಿಹಾಳ್ ಇದ್ದರು.
ಈ ಸಂದರ್ಭದಲ್ಲಿ ಪಿ.ಆರ್.ವೆಂಕಟೇಶ, ಸಿ.ಪನ್ನಾರಾಜ್ , ಲೇಖಕ ಯು.ಶ್ರೀನಿವಾಸ ಮೂರ್ತಿ, ಉಪನ್ಯಾಸಕರಾದ ಚಾಂದ್ ಬಾಷಾ, ಸರಳ ದೇವಿ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ . ದಸ್ತಗೀರಸಾಬ್ ದಿನ್ನಿ,, ಬಸವರಾಜ ಬಿಸ್ಲಳ್ಳಿ , ಮಲ್ಲಿಕಾರ್ಜುನ ಹಿರೇಮಠ ಹಂದಿಹಾಳು, ಕವಯತ್ರಿ ಎನ್.ಡಿ.ವೆಂಕಮ್ಮ, ಎರ್ರಿಸ್ವಾಮಿ.ವೀರೇಶಯ್ಯ ಸ್ವಾಮಿ ,ಡಾ.ಪರಸಪ್ಪ ಪುಸ್ತಕಾಗಾರ ನವೀನ್ ಗಾಂಧಿ, ಹೊಸಪೇಟೆ ಶಿವರಾಮ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹೆಜ್ಜೇನು ಪ್ರಕಾಶನದ ಅರುಣ್ ಭೂಪಾಲ್ ಇವರಿಂದ ಸ್ಟಾಂಡ್ ವಿತ್ ಬುಕ್ಸ್ ಕಾರ್ಯಕ್ರಮದ ಮೂಲಕ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಯಿತು.
ಮಕ್ಕಳ ಸಾಹಿತಿ ಡಾ.ಶಿವಲಿಂಗಪ್ಪ ಹಂದಿಹಾಳು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.