ಬಳ್ಳಾರಿ,ಸೆ.25: ಕಳೆದ ಕೆಲ ದಿನಗಳಿಂದ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನಸಂಸ್ಥೆಯ ಸಭಾಂಗಣ ಪಕ್ಕದಲ್ಲಿ ಧೂಳೆಬ್ಬಿಸಿ ಜನ ಜೀವನಕ್ಕೆ ಮಾರಕವಾಗಿದ್ದ ಕ್ರಷರ್ ಅನ್ನು ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಪಾಲಿಕೆಯ ಹಾಲಿ ಸದಸ್ಯೆ ರಾಜೇಶ್ವರಿ ಸುಬ್ಬರಾಯುಡು ಅವರು ಸ್ಥಗಿತಗೊಳಿಸುವಂತೆ ಮಾಲೀಕರಿಗೆ ತಾಕೀತು ಮಾಡಿದರು.
ಸ್ಥಳೀಯ ಸಾರ್ವಜನಿಕರ ಮತ್ತುರೋಗಿಗಳ ಮನವಿಯ ಮೇರೆಗೆ ಕ್ರಷರ್ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರು ಕ್ರಷರ್ ಮಾಲೀಕರನ್ನು ಭೇಟಿಯಾಗಿ, ಕ್ರಷರ್ ನಿಂದ ವಿಮ್ಸ್ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗುತ್ತಿರುವ ಮಾಲಿನ್ಯದ ಕುರಿತು ತಿಳುವಳಿಕೆ ನೀಡಿದರು. ಪ್ರತಿನಿತ್ಯ ವಿಮ್ಸ್ ಗೆ ಸಾವಿರಾರು ರೋಗಿಗಳು ಬರುತ್ತಾರೆ, ಹೋಗುತ್ತಾರೆ. ಜ£ರಿಗಾಗಿ ಇಲ್ಲಿ ತೆರೆದಿರುವ ಹೋಟೆಲ್ ಹಾಗೂ ದಿನಸಿ ಅಂಗಡಿಗಳಲ್ಲೂ ಆಹಾರ ಖಾದ್ಯಗಳ ಮೇಲೆ ಧೂಳು ಆವರಿಸಿ ಸಮಸ್ಯೆ ಆಗುತ್ತಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಷರ್ ಚಟುವಟಿಕೆ ನಿಲ್ಲಿಸುವಂತೆ ಸೂಚಿಸಿದರು. ಸಮಯಪ್ರಜ್ಞೆ ಮೆರೆದು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಿದ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರ ಸಾಮಾಜಿಕ ಕಳಕಳಿಗೆ ಸ್ಥಳೀಯರು ಹಾಗೂ ಹೋಟೆಲ್, ದಿನಸಿ ಅಂಗಡಿಗಳ ಮಾಲೀಕರು ಅಭಿನಂದನೆಗಳನ್ನು ಸಲ್ಲಿಸಿದರು.