ಬಳ್ಳಾರಿ, ಏ.11: ಲೋಕಸಭಾ ಚುನಾವಣೆ ಹಿನ್ನಲೆ ಅಲರ್ಟ್ ಆಗಿರುವ ಪೊಲೀಸರು, ಏ.7 ರಂದು ಬಳ್ಳಾರಿಯಲ್ಲಿ 5 ಕೋಟಿ 60 ಲಕ್ಷ ಹವಾಲಾ ಹಣ, ಸೇರಿದಂತೆ ಚಿನ್ನ, ಬೆಳ್ಳಿ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನರೇಶ್ ಹವಾಲಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್ಪಿ ರಂಚಿತಕುಮಾರ ಬಂಡಾರು ಅವರು ಹೇಳಿದ್ದಾರೆ. ಬಳ್ಳಾರಿ ಡಿಸಿ ಕಚೇರಿಯಲ್ಲಿ ಮಾತನಾಡಿ, ‘ಬಳ್ಳಾರಿ ನಗರ ಮತ್ತು ಸುತ್ತಮುತ್ತ ಹವಾಲಾ ದಂಧೆ ನಡೆಸುತ್ತಿದ್ದ ನರೇಶ್, ಈ ಹಿಂದೆಯೂ ಹವಾಲಾ ಮೂಲಕ ಹಣ ವರ್ಗಾಯಿಸಿದ್ದ.
ಈ ಹಿನ್ನಲೆ ಕಳೆದ 3 ತಿಂಗಳಿಂದ ನರೇಶ್ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ನಿಖರ ಮಾಹಿತಿ ಮೇರೆಗೆ ಏ.7ರಂದು ಬಳ್ಳಾರಿಯ ಕಂಬಳಿ ಬಜಾರ್ನ ನರೇಶ್ ಮನೆ ಮೇಲೆ ಏಕಕಾಲದಲ್ಲಿ ಐಟಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ, ಆತನ ಮನೆಯಲ್ಲಿದ್ದ 5 ಕೋಟಿ 60 ಲಕ್ಷ ಹಣ, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ ಮತ್ತು 103 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ನರೇಶ್ಗೆ ನೋಟಿಸ್ ನೀಡಲಾಗಿತ್ತು. ನರೇಶ್ ವಿಚಾರಣೆ ವೇಳೆ ಪೊಲೀಸರು ಸ್ಫೋಟಕ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.