ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿಂದ ಬುಧವಾರ ಬಿಡುಗಡೆಯಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನಾಗೇಂದ್ರ ಅವರಿಗೆ ನ್ಯಾಯಾಲಯದಿಂದ ಸೋಮವಾರ ಜಾಮೀನು ದೊರೆತಿತ್ತು. ನ್ಯಾಯಾಲಯದ ಜಾಮೀನಿನ ಆದೇಶ ಪ್ರತಿ ಜೈಲಿಗೆ ತಲುಪದ ಕಾರಣ ಇಂದು ನಾಗೇಂದ್ರ ಅವರನ್ನು ಜೈಲಿನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಈ ನಡುವೆ ನೆಚ್ಚಿನ ನಾಯಕ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಸಂಭ್ರಮಿಸಿದರು. ನಾಯಕನನ್ನು ಮೇಲೆತ್ತಿ ಕಾಣಿದಾಡಿದ್ದು, ಹೂವಿನ ಹಾರ ಹಾಕಿ, ಬೂದಗುಂಬಳ ಹೊಡೆದು ಸಂಭ್ರಮಾಚರಿಸಿದರು.
ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ಆದರೂ ನನ್ನನ್ನು ಬಂಧಿಸಿ ಇಡಿ ಅಧಿಕಾರಿಗಳು 3 ತಿಂಗಳ ಕಾಲ ಕಿರುಕುಳ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಎಸ್ಐಟಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದರೂ ಕೇಂದ್ರ, ಬಿಜೆಪಿಯಿಂದ ಷಡ್ಯಂತ್ರ ರೂಪಿಸಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ಕೇಂದ್ರ ಹಾಗೂ ಬಿಜೆಪಿಯಿಂದ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಕೇಂದ್ರದ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಹೇಳಿದರು.
ಹಣ ವರ್ಗಾವಣೆ ಮಾಡಲು ನನ್ನಿಂದ ಯಾವುದೇ ಶಿಫಾರಸು ಆಗಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿ ಮಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ, ಈಗ ಹೊರ ಬಂದಿದ್ದೇನೆ. ಎಸ್ಐಟಿ ಅಧಿಕಾರಿಗಳು ಕೂಡ ಯಾವ ಇಡಿ, ಸಿಬಿಐಗೆ ಕಡಿಮೆ ಇಲ್ಲ. ಇಡಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
3 ಕ್ಷೇತ್ರಗಳ ಉಪಚುನಾವಣೆ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಯನ್ನು ಕಿತ್ತೊಗೆದಿದ್ದೇವೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿಯನ್ನ ಸೋಲಿಸುತ್ತೇವೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಬಳ್ಳಾರಿ ಜಿಲ್ಲೆಯಿಂದಲೂ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿದರು.
ಜೈಲಿಂದ ಹೊರಗೆ ಬಂದವರೇ ಸಚಿವ ಜಮೀರ್ ಮನೆಗೆ ಹೋಗಿ ತಬ್ಬಿಕೊಂಡ ಮಾಜಿ ಸಚಿವ ನಾಗೇಂದ್ರ!
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಜೈಲಿನಿಂದ ಬಿಡುಗಡೆಯಾದ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಸ್ ಐಟಿ ತನಿಖೆ ನಡೆಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ ಹಾಕುತ್ತಿತ್ತು ಎಂದು ಆರೋಪಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಮರುಕ್ಷಣವೇ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಗೆ ತೆರಳಿದ್ದಾರೆ. ಅಲ್ಲಿ ಇಬ್ಬರೂ ಸಂತಸದಿಂದ ತಬ್ಬಿಕೊಂಡು ಕುಶಲೋಪರಿ ವಿಚಾರಣೆ ಮಾಡಿಕೊಂಡಿದ್ದಾರೆ.
ಸಚಿವ ಜಮೀರ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ನಾಗೇಂದ್ರ ಅವರು, ಕಳೆದಮೂರು ತಿಂಗಳಿದ ದುಷ್ಟ ರಾಜಕೀಯ ಮಾಡಿಕೊಂಡು ಬಿಜೆಪಿಯವರು ಬರ್ತಾ ಇದ್ದಾರೆ. ಬಿಜೆಪಿ ಇಡಿಯನ್ನ ಕೈ ಗೊಂಬೆ ಮಾಡಿಕೊಂಡಿದ್ದಾರೆ. ಎಲ್ಲಿ ಬಿಜೇಪಿಯೇತರ ಸರ್ಕಾರ ಇರುತ್ತದೋ, ಅಲ್ಲಿ ಸರ್ಕಾರವನ್ನ ತೆಗೆಯುವ ಪ್ರಯತ್ನ ಮಾಡಿದ್ತಿದ್ದಾರೆ. ಮೂರು ತಿಂಗಳಿಂದ ಜೈಲಿನಲ್ಲಿ ಇದ್ದೆ. ಇವತ್ತು ನ್ಯಾಯಾಧೀಶರು ಬಿಡುಗಡೆ ಮಾಡಿದ್ದಾರೆ. ಇವತ್ತು ಬಿಜೆಪಿ 66 ಜನ ಶಾಸಕರಿದ್ದಾರೆ. ಮುಂದೆ ಅದು ಇನ್ನು ಕಡಿಮೆ ಆಗುತ್ತದೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತರ್ತಿದ್ದಾರೆ. ಅವರಿಗೆ ಸಂಧಿಗ್ಧ ಪರಿಸ್ಥಿತಿ ತರ್ತಾ ಇದ್ದಾರೆ. ನ್ಯಾಯ ಅನ್ನೋದು ಇರುತ್ತೆ, ನಮ್ಮ ಪಾತ್ರ ಏನು ಇಲ್ಲ. ಮುಡಾದಲ್ಲೂ ಸಹ ಸಿಎಂ ಅವರ ಪಾತ್ರ ಇಲ್ಲ. ಜಾರಿ ನಿರ್ದೇಶನಾಲಯ (ಇಡಿ) ಅವರು ಒತ್ತಡ ಹಾಕ್ತಾ ಇದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಹೆಸರು ಹೇಳು ಡಿಸಿಎಂ ಹೆಸರು ಹೇಳಿ, ಅವರ ಇವರ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದರು. ಸರ್ಕಾರವನ್ನ ಅಸ್ಥಿರ ಮಾಡೋ ಕೆಲಸ ಮಾಡ್ತಾ ಇದ್ದರು. ಮುಂದಿನ ದಿನಗಳಲ್ಲಿ ನೀವೆಲ್ಲರೂ ಸಾಕ್ಷಿ ಆಗ್ತೀರಾ. ಈ ಕೇಸ್ ಬಿದ್ದು ಹೋಗುತ್ತದೆ ಎಂದು ನಾಗೇಂದ್ರ ಹೇಳಿದರು.
ಟೈಗರ್ ಈಸ್ ಬ್ಯಾಕ್ ಅವರ ನೇತೃತ್ವದಲ್ಲೇ ಸಂಡೂರು ಚುನಾವಣೆ: ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಕೇಸನ್ನು ಎಸ್ ಐಟಿ ತನಿಖೆಗೆ ಕೊಡಲಾಗಿತ್ತು. ಎಲ್ಲಾ ಹಣವನ್ನ ಎಸ್ ಐಟಿ ರಿಕವರಿ ಮಾಡಿದೆ. ಇನ್ನು 3.80 ಲಕ್ಷ ರಿಕವರಿ ಆಗಬೇಕಿದೆ. ಇಡಿಯವರು ಚಾರ್ಜ್ ಶೀಟ್ ಹಾಕಿದ್ದಾರೆ. ಬೈ ಎಲೆಕ್ಷನ್ ಗೆ ನಾಗೇಂದ್ರ ಕರೆದುಕೊಂಡು ಹೋಗ್ತಿರಾ ಎಂಬ ಪ್ರಶ್ನೆ ಬಗ್ಗೆ ಮಾತನಾಡಿ, ಅವರೇ ಎಲೆಕ್ಷನ್ ಮಾಡಬೇಕು. ಟೈಗರ್ ಈಸ್ ಬ್ಯಾಕ್, ಅವರ ನೇತೃತ್ವದಲ್ಲೆ ಚುನಾವಣೆಯಾಗುತ್ತದೆ ಎಂದು ಹೇಳಿದರು.
ಸಂಡೂರಲ್ಲಿ ರಾಮುಲು ಅಲ್ಲ ಮೋದಿ ಬಂದು ನಿಂತುಕೊಳ್ಳಲಿ ನಾವು ಇಲ್ಲಿ ಖಚಿತವಾಗಿ ಗೆಲ್ಲುತ್ತೇವೆ. ಸಂಡೂರು ಅಭ್ಯರ್ಥಿಯನ್ನ ಶೀಘ್ರದಲ್ಲೇ ಫೈನಲ್ ಮಾಡ್ತೀವಿ. ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯ ಇದೆ. ಕಳೆದ ಐದಾರು ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಾಗಿದೆ. ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡ್ತೀವಿ. ಚನ್ನಪಟ್ಟಣದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಮಾಡೋದು ಅವರ ಪಕ್ಷಕ್ಕೆ ಬಿಟ್ಟದ್ದು. ಯೋಗೇಶ್ವರ್ ಕಾಂಗ್ರೆಸ್ಗೆ ಕರೆತರುವ ಬಗ್ಗೆ ಆಲೋಚನೆ ಇಲ್ಲ. ಅಲ್ಲಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಸಚಿವ ಜಮೀರ್ ಹೇಳಿದರು.
ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ ನಾಗೇಂದ್ರ ಇಂದು ಬಳ್ಳಾರಿಗೆ
ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಜೈಲಿನಲ್ಲಿದ್ದ ಮಾಜಿ ಸಚಿವ ಹಾಲಿ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡು ಇಂದು ಬಳ್ಳಾರಿ ನಗರಕ್ಕೆ ಆಗಮಿಸಲಿದ್ದಾರೆ.
ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಇರುವುದರಿಂದ ಬಳ್ಳಾರಿಗೆ ಆಗಮಿಸಿದ ಮೊದಲಿಗೆ ಅವರು ನಗರದ ನಗರದ ವಾಲ್ಮೀಕಿ ವೃತ್ತದಲ್ಲಿರುವ (SP CIRCLE) ಶ್ರೀ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಮಾಲಾರ್ಪಣೆಯನ್ನು ಮಾಡಿದ ನಂತರ ನಲ್ಲಚೇರವು ಪ್ರದೇಶದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಹಲವಾರು ದಿನಗಳಿಂದ ಅವರಿಗಾಗಿ ಕಾಯುತ್ತಿರುವ ನಾಗೇಂದ್ರ ಅವರ ಅಭಿಮಾನಿಗಳು ಮತ್ತು ಗ್ರಾಮಾಂತರ ಪ್ರದೇಶದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೆಹರು ಕಾಲೋನಿಯ ತಮ್ಮ ನಿವಾಸದಲ್ಲಿ ಭೇಟಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.