ಬಳ್ಳಾರಿ : ಭೀಮ್ ಆರ್ಮಿ ಭಾರತ್ ಏಕ್ತಾ ಮಿಷನ್ ಅಂಗವಾಗಿ ಹಲಕುಂದಿ ಗ್ರಾಮದ ಗಾಂಧಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ಭೀಮ್ ಆರ್ಮಿ ಬಳ್ಳಾರಿ ತಾಲೂಕು ಅಧ್ಯಕ್ಷರಾದ ಎನ್ ಹರಿಕೃಷ್ಣ ಅವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.
ವಿತರಣೆ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎನ್ ಹರಿಕೃಷ್ಣ ಮಾತನಾಡಿ ಖಾಸಗಿ ಶಾಲೆಯ ಮಕ್ಕಳು ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು, ಸರಕಾರಿ ಶಾಲೆಗಳು ಬಲಿಷ್ಟವಾಗಬೇಕೆಂಬ ಆಶಯ ನಮ್ಮದಾಗಿದೆ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸುವುದರಿಂದ ಅವರ ಕಲಿಕೆಯ ಶಿಕ್ಷಣ ಪ್ರವೃತ್ತಿಗೆ ಅತ್ಯಂತ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಶಿವಕುಮಾರ್ ಹೆಗಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲೆಯ SSLCಯು ಮೊದಲ ಹಂತ ಈ ಹಂತದಲ್ಲಿ ತಾವುಗಳೆಲ್ಲ ಗೆಲ್ಲಬೇಕು, ಇತಿಹಾಸ ಪುಟ ನೋಡಿದಾಗ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, ಕಲಿಕೆಗೆ ಶ್ರೀಮಂತಿಕೆ, ಬಡತನ ಎನ್ನುವುದಕ್ಕಿಂತ ಕಲಿಕೆಯ ಮನಸ್ಸು ಮುಖ್ಯ, ಇದೇ ಸಾಧನೆ ದೊಡ್ಡಶಕ್ತಿ ಎಂದು ತಿಳಿಸಿದರು.
ಈ ವಿತರಣೆ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಉಪಾಧ್ಯಕ್ಷ ರಾಜಣ್ಣ, ಶಿವಕುಮಾರ್, ಶಾಲೆಯ SDMC ಅಧ್ಯಕ್ಷ ತಿಮ್ಮನಗೌಡ, ಕಾರ್ಯದರ್ಶಿ ತಿಮ್ಮ ರೆಡ್ಡಿ, ಪ್ರಾಂಶುಪಾಲ ಟಿ.ವೈಸರಾವ್, ಶಿಕ್ಷಕರಾದ ನಾಗರಾಜ್, ನರಸಿಂಹ, ಸಿದ್ದೇಶ್ವರ ಗೌಡ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.