ಬೆಂಗಳೂರು, ಜೂನ್ 30: ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಅನುದಾನಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಾನಸ ಸರೋವರ ಯಾತ್ರಾರ್ಥಿಗಳಿಗೆ ತಲಾ 30 ಸಾವಿರ ರೂ, ಚಾರ್ಧಾಮ್ (ಗಂಗೋತ್ರಿ ಯಮುನೋತ್ರಿ, ಕೇದಾರ್ನಾಥ್, ಬದರೀನಾಥ್) ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ 20 ಸಾವಿರ ರೂ, ಕಾಶಿ ಯಾತ್ರೆ ಕೈಗೊಂಡ 30,000 ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ಪಾವತಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಮುಜರಾಯಿ ಇಲಾಖೆ ಪ್ರಕಟಿಸಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯ ಮಾರ್ಗಸೂಚಿಗಳು :
- ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನವನ್ನು ಪಡೆಯಲು ಇಚ್ಚಿಸಿದಲ್ಲಿ, ಆಯಾ ಆರ್ಥಿಕ ಸಾಲಿನಲ್ಲಿ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರು ನಿಗದಿಪಡಿಸಲಾಗುವ ದಿನಾಂಕಗಳ ಒಳಗೆ ಅಗತ್ಯ ದಾಖಲೆಗಳೊಂದಿಗೆ ರೂ.25/-ಗಳ ಶುಲ್ಕ ಪಾವತಿಸಿ ಸಂಬಂಧಿಸಿದ ವೆಬ್ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
- ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ಸದರಿ ಅರ್ಜಿಯ ಬಗ್ಗೆ ಸಂಬಂಧಿಸಿದ ಪಕ್ರಿಯೆಗಳಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಹಾಗೂ ಚೀನಾ ದೇಶಕ್ಕೆ ಪಾವತಿಸಬೇಕಾಗುವ ಮೊತ್ತವನ್ನು ಸಂಬಂಧಪಟ್ಟ ಯಾತ್ರಾರ್ಥಿಗಳೇ ಭರಿಸಬೇಕು.
ಚಾರ್ಧಾಮ್ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡುವುದು.
- 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. 45 ವರ್ಷ ಮೇಲ್ಪಟ್ಟಿರುವ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್ಲೋಡ್ ಮಾಡಬೇಕು.
- ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ.
ಕಾಶಿ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
- ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು. 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.
- ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.
- ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.