ಬಳ್ಳಾರಿ,ಮಾ.11 : ರಾಜ್ಯದ ಜನತೆಯ ಅಭೂತಪೂರ್ವ ಆಶೀರ್ವಾದದಿಂದ ಆಡಳಿತಕ್ಕೆ ಬಂದ ನಮ್ಮ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಯ ಸಂಜೀವಿನಿಯಾಗಿವೆ ಎಂದು ಯುವ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮೋಕಾ ರಸ್ತೆಯ ಸುವರ್ಣ ಇಂಟರ್ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ‘ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನಮ್ಮ ಸರ್ಕಾರವು ನುಡಿದಂತೆ ನಡೆದಿದೆ. ಈಗ ದೇಶವೇ ನಮ್ಮ ರಾಜ್ಯದತ್ತ ನೋಡುತ್ತಿದ್ದು, ಇತರೆ ರಾಜ್ಯಗಳಿಗೆ ನಮ್ಮ ಸರ್ಕಾರವು ಮಾದರಿಯಾಗಿದೆ. ನಮ್ಮ ಸರ್ಕಾರದಂತೆಯೇ ಅಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲು ಈ ಯೋಜನೆಗಳನ್ನು ರೂಪಿಸಿದ್ದು, ತಾಯಂದಿರು, ಅಕ್ಕ ತಂಗಿಯರು ಗ್ಯಾರಂಟಿ ಯೋಜನೆಗಳಿಂದ ಬಹಳ ಸಂತುಷ್ಟರಾಗಿದ್ದು, ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎನ್ನುವಂತೆ ರಾಜ್ಯದ ಜನತೆಯ ತೆರಿಗೆ ಹಣವನ್ನು ರಾಜ್ಯದ ಜನತೆಯ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆಯೇ ಹೊರತು, ರಾಜ್ಯ ಸರ್ಕಾರದ ಯಾವುದೇ ಸ್ವಹಿತಾಸಕ್ತಿ ಇಲ್ಲ ಎಂದು ಮನದಟ್ಟು ಮಾಡಿದರು.
ಜನಪರ ಕಾಳಜಿಯಿರುವ ಯೋಜನೆಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು 5 ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ನಮ್ಮ ಸರ್ಕಾರವು ಇರುವವರೆಗೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲೆಯಲ್ಲಿ ಮಾಹಿತಿ ಕೊರತೆಯಿಂದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಪ್ರತಿ ಫಲಾನುಭವಿಗಳ ಮನೆಗೆ ಭೇಟಿ ನಡೆಸಬೇಕು. ತಿಂಗಳೊಳಗಾಗಿ ಅವರ ಸಮಸ್ಯೆಗಳನ್ನು ಕಂಡುಕೊಂಡು ಪರಿಹಾರ ಒದಗಿಸಬೇಕು ಎಂದು ಸಚಿವ ಬಿ.ನಾಗೇಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ವೆಚ್ಚ ಮಾಡಿದ ಒಟ್ಟು ಮೊತ್ತ:
ಬಳ್ಳಾರಿ ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಒಟ್ಟು 566.53 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಗೆ 65.62 ಕೋಟಿ ರೂ., ಗೃಹಲಕ್ಷ್ಮಿ ಯೋಜನೆಗೆ 301.84 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 111.92 ಕೋಟಿ ರೂ., ಗೃಹಜ್ಯೋತಿ ಯೋಜನೆಗೆ 87 ಕೋಟಿ ರೂ., ಯುವನಿಧಿ ಯೋಜನೆಗೆ 0.15 ಕೋಟಿ ರೂ. ಸೇರಿ ಒಟ್ಟು 566.53 ಕೋಟಿ ರೂ. ಮೊತ್ತ ವೆಚ್ಚ ಮಾಡಲಾಗಿದೆ ಎಂದು ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಮಾತನಾಡಿ, ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರೆ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಗ್ಯಾರಂಟಿ ಯೋಜನೆಗಳು ಉಪಯುಕ್ತವಾಗಿವೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂದು ಹೇಳಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ, ಅಭಿವೃದ್ಧಿ ಪರ ಯೋಜನೆಗಳನ್ನೂ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಕಳೆದ ಬಜೆಟ್ನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ 200 ಕೋಟಿ ರೂ. ಅನುದಾನ ನೀಡಿದ್ದಾರೆ. ನಗರದಲ್ಲಿ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಎಪಿಎಂಸಿಯವರೆಗೆ 11 ಕೋಟಿ ರೂ. ವೆಚ್ಚದ ರಸ್ತೆ, 9 ಕೋಟಿ ರೂ. ವೆಚ್ಚದಲ್ಲಿ ಶಾಂತಿನಗರದಿಂದ ಕೊಳಗಳ್ವರೆಗೆ ರಸ್ತೆ, ಜಿಲ್ಲೆಯ 220 ಅಂಗನವಾಡಿ ಕೇಂದ್ರಗಳಿಗೆ ಫ್ರಿಡ್ಜ್ ವಿತರಿಸಲಾಗಿದೆ. ನಗರದ 6,072 ನಿವಾಸಿಗಳಿಗೆ ಪಟ್ಟಾ ವಿತರಿಸಲಾಗುವುದು. ಮುಂಡರಗಿ ಆಶ್ರಯ ಯೋಜನೆಯಡಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಚಿತ್ರಣ ಬಿಚ್ಚಿಟ್ಟರು.
ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ:
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ರಾಯಾಪುರದಿಂದ ಆಂಧ್ರ ಗಡಿಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ, ಬೆಳಗಲ್ಲು ಕೆರೆಯಿಂದ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ, ಮೋಕಾ ಗ್ರಾಮದಲ್ಲಿ ಇ-ಸೇವಾ ಮತ್ತು ಡಿಜಿಟಲ್ ಲೈಬ್ರರಿ ನಿರ್ಮಾಣ ಕಾಮಗಾರಿ, ಹೊಸ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಬಹು ಉದ್ದೇಶದ ಡೈನಿಂಗ್ ಹಾಲ್ ಒಳಾಂಗಣ ಆಟಗಳ ಆಡಿಟೋರಿಯಂ ಯೋಜನೆಯ ಕಾಮಗಾರಿ, ಬಳ್ಳಾರಿ ತಾಲ್ಲೂಕಿನ ಸಿಂಧುವಾಳ ಗ್ರಾಮದ ಹತ್ತಿರ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಫಲಾನುಭವಿಗಳ ಅನಿಸಿಕೆ:
1. ‘ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣದಿಂದ ಮಕ್ಕಳ ಓದಿನ ಖರ್ಚು, ಔಷಧಿ ಖರ್ಚಿಗೆ, ದಿನಬಳಕೆಯ ಸಾಮಾಗ್ರಿಗಳಿಗೆ ಮತ್ತೆ ಕುಟುಂಬದ ನಿರ್ವಹಣೆಗೆ ಉಪಯೋಗವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಧನ್ಯವಾದ ತಿಳಿಸುತ್ತೇನೆ.’
– ಶಕುಂತಲಮ್ಮ, ದಮ್ಮೂರು ಗ್ರಾಮ, ಗೃಹಲಕ್ಷ್ಮಿ ಯೋಜನೆ ಫಲಾನುಭವಿ.
2. ‘ಈ ಮುಂಚೆ ದೇವಸ್ಥಾನಗಳಿಗೆ ಹೋಗಲು ಸಾಕಷ್ಟು ಹಣ ಬೇಕಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದಿಂದ ನಮ್ಮ ಮನೆಯವರು, ಸ್ನೇಹಿತೆಯರೊಂದಿಗೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ತುಂಬಾ ಸಂತೋಷವಾಗಿದೆ. ಇದೇ ಸರ್ಕಾರ ಮುಂದುವರೆಯಲಿ’.
– ಅರ್ಕಾಣಿ, ಗೃಹಿಣಿ, ಶಕ್ತಿ ಯೋಜನೆ ಫಲಾನುಭವಿ.
ಬಳಿಕ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಿದರು. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಿದರು. ಅತ್ಯುತ್ತಮ ಸೇವೆಗೈದ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ.ತುಕಾರಾಂ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಾಲಿಕೆಯ ಉಪ ಮೇಯರ್ ಬಿ.ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.