ಹಿಂದಿ ಬಾಕ್ಸ್ ಆಫೀಸ್ನಲ್ಲಿ ‘ಹನುಮಾನ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಬಹಿರಂಗಪಡಿಸಿದ್ದಾರೆ. ಹಿಂದಿ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಮಾಡಿದ್ದ ಕಲೆಕ್ಷನ್ ಅನ್ನು ಈಗ ‘ಹನುಮಾನ್’ ಸಿನಿಮಾ ಮೀರಿಸಿದೆ.ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಕಥೆ, ಮೇಕಿಂಗ್ ಚೆನ್ನಾಗಿದ್ದರೆ ಹಿಂದಿ ಪ್ರೇಕ್ಷಕರು ಸೌತ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಹಿಂದೆ ‘ಬಾಹುಬಲಿ’, ‘ಕೆಜಿಎಫ್’ ‘ಆರ್ಆರ್ಆರ್’ ಮುಂತಾದ ಸಿನಿಮಾಗಳು ಹಿಂದಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದವು. ಈಗ ತೆಲುಗಿನ ‘ಹನುಮಾನ್’ ಸಿನಿಮಾ ಕೂಡ ಉತ್ತರ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಹಿಂದಿಗೆ ಡಬ್ ಆಗಿ ತೆರೆಕಂಡ ಈ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗಿದೆ. ಈ ಮೊದಲು ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್: ಚಾಪ್ಟರ್ 1’ ಮಾಡಿದ್ದ ದಾಖಲೆಯನ್ನು ಈಗ ‘ಹನುಮಾನ್’ ಸಿನಿಮಾ ಮುರಿದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಹಿಂದಿಗೆ ಡಬ್ ಆಗಿ ಮೆಚ್ಚುಗೆ ಪಡೆದಿತ್ತು. ಹಿಂದಿ ವರ್ಷನ್ನಿಂದ ಆ ಸಿನಿಮಾಗೆ ಬರೋಬ್ಬರಿ 44 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈಗ ಆ ಮೊತ್ತವನ್ನು ‘ಹನುಮಾನ್’ ಸಿನಿಮಾ ಹಿಂದಿಕ್ಕಿದೆ. ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಿರುವ ‘ಹನುಮಾನ್’ ಸಿನಿಮಾ 50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
‘ಹನುಮಾನ್’ ಸಿನಿಮಾದಲ್ಲಿ ತೇಜ ಸಜ್ಜಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆಂಜನೇಯನಿಂದ ಸೂಪರ್ ಪವರ್ ಪಡೆಯುವ ಹಳ್ಳಿ ಹೈದನ ಕಹಾನಿ ಈ ಸಿನಿಮಾದಲ್ಲಿದೆ. ವಿಶ್ವಾದ್ಯಂತ, ಎಲ್ಲ ಭಾಷೆಯ ವರ್ಷನ್ನಿಂದ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ. ಆ ಮೂಲಕ ತೇಜ ಸಜ್ಜಾ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ಸಿಕ್ಕಂತೆ ಆಗಿದೆ.
ತೇಜ ಸಜ್ಜಾ ಅವರಿಗೆ ಜೋಡಿಯಾಗಿ ಕನ್ನಡದ ಹುಡುಗಿ ಅಮೃತಾ ಅಯ್ಯರ್ ಅವರು ನಟಿಸಿದ್ದಾರೆ. ಕನ್ನಡದ ನಟ ರಾಜ್ ದೀಪಕ್ ಶೆಟ್ಟಿ ಅವರು ಕೂಡ ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವರಲಕ್ಷ್ಮಿ ಶರತ್ಕುಮಾರ್ ಅವರು ಕಥಾನಾಯಕ ಅಕ್ಕನ ಪಾತ್ರದಲ್ಲಿ ಮಿಂಚಿದ್ದಾರೆ. ವಿನಯ್ ರೈ ಅವರು ಮಾಡಿರುವ ವಿಲನ್ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ತೇಜ ಸಜ್ಜಾ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ‘ಜೈ ಹನುಮಾನ್’ ಸಿನಿಮಾದ ಕಡೆಗೆ ಗಮನ ಹರಿಸಿದ್ದಾರೆ.