ಬೆಂಗಳೂರು,ಏ.02 : ಮುಡಾ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಡಿ ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಇಡಿಗೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಇಂದು ಆದೇಶ ಹೊರಡಿಸಿದೆ. ಕಳೆದ ತಿಂಗಳಷ್ಟೇ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ರೆ, ಇದೀಗ ಇಡಿ ತನಿಖೆಗೆ ಅನುಮತಿ ನೀಡಿದ್ದು ಪ್ರಕರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಮುಡಾ ಹಗರಣದಲ್ಲಿ ಇಡಿ ಪ್ರವೇಶ ಮಾಡುವುದರಿಂದ ಪ್ರಕರಣದ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎ2 ಆಗಿರುವ ಪತ್ನಿ ಪಾರ್ವತಿ ಸೇರಿದಂತೆ ಇತರರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಇಡಿ ಸಮನ್ಸ್ ರದ್ದು ಕೋರಿ ಡಾ.ಡಿ.ಬಿ.ನಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಟೇಶ್ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೇ ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಇಡಿ ತನಿಖೆ ಮುಂದುವರಿಸಬಹುದು ಎಂದು ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠವು ಇಡಿ ಶೋಧನೆ, ಜಪ್ತಿ ರದ್ದುಪಡಿಸಿತ್ತು. ಆದ್ರೆ, ಏಕಸದಸ್ಯ ಪೀಠದ ಆದೇಶ ಇತರೆ ಕೇಸ್ ಗೆ ಅನ್ವಯವಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಗೆ ಮತ್ತೆ ಇಡಿ ತನಿಖೆಯ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಲೋಕಾಯುಕ್ತ ಸಲ್ಲಿಸಿರುವ ಈ ವರದಿಯನ್ನು ತಿರಸ್ಕರಿಸುವಂತೆ ಜಾರಿ ನಿರ್ದೇಶನಾಲಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. ಹೀಗಾಗಿ ಕೋರ್ಟ್ ಯಾವ ತೀರ್ಪು ಕೊಡುತ್ತೋ ಎಂದು ಸಿಎಂಗೆ ಢವ ಢವ ಶುರುವಾಗಿದೆ.
ಕೊಡಲು ಇದೆ ಬಲವಾದ ಕಾರಣ!
ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹಾಗೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಇಡಿ ನೀಡಿದ್ದ ಸಮನ್ಸ್ ಸಹ ಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ನಿರಾಳರಾಗಿದ್ದರು. ಆದ್ರೆ, ಇದೀಗ ಹೈಕೋರ್ಟ್ ವಿಭಾಗೀಯ ಪೀಠವು ಇಡಿ ತನಿಖೆಗೆ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಸೇರಿ ಇತರೆ ಆರೋಪಿಗಳನ್ನು ಬಿಚ್ಚಿಬೀಳುವಂತೆ ಮಾಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಏಕ ಕಾಲಕ್ಕೆ ದಾಳಿ ನಡೆಸಿತ್ತು. ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ, ನಟೇಶ್ ಮನೆಗಳ ಮೇಲೆ ದಾಳಿ ಮಾಡಿ ಹಲವು ದಾಖಲೆ ಸಂಗ್ರಹಿಸಿತ್ತು. ಬಳಿಕ ಕೋರ್ಟ್ ಇಡಿ ತನಿಖೆಗೆ ಬ್ರೇಕ್ ಹಾಕಿತ್ತು. ಆದ್ರೆ, ಇದೀಗ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವುದದರಿಂದ ಇಡಿ, ಈ ಮುಡಾ ಹಗರಣದಲ್ಲಿ ಪ್ರವೇಶ ಮಾಡುವುದು ಖಚಿತವಾಗಿದೆ.