ಕಲಬುರಗಿ: ವಾರಣಾಸಿ ನ್ಯಾಯಾಲಯ, ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿದ್ದರಿಂದ ಉತ್ತೇಜನಗೊಂಡಿರುವ ಕಲಬುರಗಿಯ ಹಿಂದೂ ಜಾಗೃತಿ ಸೇನೆ, ಕಲಬುರಗಿ ಕೋಟೆಯಲ್ಲಿರುವ ಸೋಮೇಶ್ವರ ದೇವಾಲಯ ಪುನರ್ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಹಿಂದೂ ಜಾಗೃತಿ ಸೇನೆಯ ಅಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ, ನಿಜಾಮರು ಈ ಭಾಗವನ್ನು ಆಳುತ್ತಿದ್ದಾಗ ಕೋಟೆಯೊಳಗಿನ ದೇವಾಲಯವನ್ನು ಕೆಡವಿದರು. “ದೇವಾಲಯದೊಳಗೆ ಶಿವಲಿಂಗ ಇಲ್ಲದಿದ್ದರೂ ಆ ಸ್ಥಳದಲ್ಲಿ ದೇವಸ್ಥಾನ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ದೇವಾಲಯದ ಶಿಥಿಲಗೊಂಡ ರಚನೆಯು ಇಂದಿಗೂ ಅಸ್ತಿತ್ವದಲ್ಲಿದೆ. ಇದು ಆ ಕಾಲದ ದುಃಖದ ಕಥೆಯನ್ನು ಹೇಳುತ್ತದೆ” ಎಂದಿದ್ದಾರೆ.
ಕೋಟೆಯೊಳಗಿರುವ ದೇವಸ್ಥಾನವನ್ನು ಪುನರ್ನಿರ್ಮಿಸಿ, ಸಕಲ ವಿಧಿವಿಧಾನಗಳೊಂದಿಗೆ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಕಳೆದ ಎರಡು ವರ್ಷಗಳಿಂದ ತಮ್ಮ ಸಂಘಟನೆ ತೀವ್ರ ಹೋರಾಟ ನಡೆಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಲಕ್ಷ್ಮೀಕಾಂತ ಸ್ವಾದಿ ತಿಳಿಸಿದ್ದಾರೆ.
ಒಂದು ವೇಳೆ ದೇವಾಲಯವನ್ನು ಪುನರ್ನಿರ್ಮಾಣ ಮಾಡಲು ಜಿಲ್ಲಾಡಳಿತ ವಿಫಲವಾದರೆ, ಶಿವರಾತ್ರಿಯಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.