ಮಂಡ್ಯ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ಹೆಚ್.ಡಿ ಕುಮಾರಸ್ವಾಮಿಯಿಂದ ನಾನು ಲೀಡರ್ ಆಗಿಲ್ಲ. ಅವರಿಂದ ವಿನಯತೆ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಕುಮಾರಸ್ವಾಮಿ ಅವರ ಮನೆ ಋಣದಲ್ಲಿ ಇದ್ದೇನಾ? ನಾನೇನೂ ಅವರ ಆಸ್ತಿ ತಿಂದಿದ್ದೇನಾ? ಗೌರವ ಬೇಡ ಎನ್ನಲಿ. ಅವರು ಮಾತಾಡಿದ್ದಕಿಂತ ಬೇರೆ ರೀತಿಯೇ ನಾನು ಅವರಿಗೆ ಮಾತನಾಡುತ್ತೇನೆ. ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆಬರಹ ಬರೆಯಲಾಗುತ್ತಾ? ಕುಮಾರಸ್ವಾಮಿ ಅವರ ವಿಚಾರವೇ ಪ್ರಸ್ತುತ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೀನಿ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೆ ಅದರ ಅಪ್ಪನಂಗೆ ನಾನು ಕುಮಾರಸ್ವಾಮಿ ಗೆ ಉತ್ತರ ಕೊಡುತ್ತಿದ್ದೆಎಂದು ಚಲುವರಾಯಸ್ವಾಮಿ ಅವರು ತಿರುಗೇಟು ನೀಡಿದರು.
ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಬೈರೇಗೌಡ ಇವರನ್ನು ಜೆಡಿಎಸ್ ನಿಂದ ಹೊರ ಕಳುಹಿಸಿದ್ದು ಯಾರೆಂದು ಕುಮಾರಸ್ವಾಮಿ ಹೇಳಲಿ. ಮಂಡ್ಯ ಇವರಿಗೆ ಕೊಟ್ಟ ಗೌರವಕ್ಕೆ ಈಗ ಅಶಾಂತಿ, ಗಲಭೆಯ ರಿಟರ್ನಸ್ ಕೊಡ್ತಿದ್ದಾರಾ ಎಂದರು.
ಮಂಡ್ಯದ ಅಭಿವೃದ್ಧಿ ಬಗ್ಗೆ ದಳಪತಿಗಳಿಂದ ಚರ್ಚೆ ಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಅವರಿಗೆ ನಾಚಿಕೆ ಆಗಬೇಕು. ಒಂದು ಅಂಗನವಾಡಿ ಕಟ್ಟಡ ಕಟ್ಟಲು ಆಗಿಲ್ಲ. ಅವರೇನೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ? ಹಿಟ್ ಅಂಡ್ ರನ್ ಕೇಸ್ ಅವರದ್ದು.
ಮಂಡ್ಯಗೆ ಬರಲು ಹೇಳಿ, ಇಲ್ಲದಿದ್ದರೆ ವಿಧಾನಸಭೆಯಲ್ಲೆ ಒಂದು ದಿನ ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡೋಣಾ. ನಾನು ಸ್ಪೀಕರ್ ಗೆ ಸಮಯ ಕೇಳುತ್ತೇನೆ. ಒಂದು ಇಡೀ ದಿನ ಕಲಾಪದಲ್ಲೇ ಚರ್ಚೆ ಮಾಡೋಣಾ. ಅವರ ಅಭಿವೃದ್ಧಿ ಶೂನ್ಯ. ಮಂಡ್ಯ ಅಭಿವೃದ್ಧಿ ಮಾಡಿದ್ದರೆ ಎಂಟು ಜನ ಯಾಕೆ ಸೋತರು ಎಂದು ಪ್ರಶ್ನಿಸಿದರು. ಇನ್ನೂ ಮಂಡ್ಯ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ. ಜನರೇ ಬಂದ್ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಗುಡುಗಿದರು.