ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ʼಕರಿಮಣಿ ಮಾಲೀಕ ನೀನಲ್ಲʼ ಹಾಡು ಬಹಳ ಟ್ರೆಂಡಿಂಗ್ ನಲ್ಲಿದೆ. ಎಲ್ಲಿ ನೋಡಿದ್ರೂ ಕರಿಮಣಿ ಮಾಲೀಕ ರೀಲ್ಸ್ ವಿಡಿಯೋಗಳೇ ಕಾಣಸಿಗುತ್ತಿವೆ. ಈ ನಡುವೆ ಇಲ್ಲೊಂದು ಜಾನಪದ ಶೈಲಿಯ ʼಕರಿಮಣಿ ಮಾಲೀಕ ನಾನಲ್ಲಂತಿʼ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಉತ್ತರ ಕರ್ನಾಟಕ ಶೈಲಿಯ ಜಾನಪದ ಸೊಗಡಿನ ಈ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.
ಯಾವುದಾದರೂ ಒಳ್ಳೆಯ ಕ್ರಿಯೇಟಿವ್ ಕಂಟೆಂಟ್ಗಳಿದ್ದರೆ, ಅಂತಹ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತವೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ದಿಢೀರನೇ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಸದ್ಯ ಇದೇ ರೀತಿ ಜಾನಪದ ಹಾಡುಗಾರ ಶಬ್ಬೀರ್ ಡಾಂಗೆ ಅವರು ʼಕರಿಮಣಿ ಮಾಲೀಕ ನಾನಲ್ಲಂತಿʼ ಎಂಬ ಉತ್ತರ ಕರ್ನಾಟಕ ಶೈಲಿಯ ಜಾನಪದ ಸೊಗಡಿನ ಗೀತೆಯನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಇಂದು ಜಾಗತೀಕರಣದ ಪ್ರಭಾವದಿಂದಾಗಿ ಜೀವನದ ಮೌಲ್ಯವನ್ನು ಪಸರಿಸುವಂತಹ, ಅರ್ಥಗರ್ಭಿತವಾದ ಜಾನಪದ ಗೀತೆಗಳು ಕಣ್ಮರೆಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಬ್ಬೀರ್ ಡಾಂಗೆ ಅವರ ಕಂಠಸಿರಿಯಲ್ಲಿ ಮೂಡಿಬಂದ ಉತ್ತರ ಕರ್ನಾಟಕ ಶೈಲಿಯ ಜಾನಪದ ಗೀತೆಯು ಇದೀಗ ನೆಟ್ಟಿಗರ ಮನ ಗೆದ್ದಿದೆ. ಈ ಹಿಂದೆ ʼಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇʼ ಎಂಬ ಜಾನಪದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ʼಕರಿಮಣಿ ಮಾಲೀಕ ನಾನಲ್ಲಂತಿʼ ಹಾಡು ಸದ್ದು ಮಾಡುತ್ತಿದೆ.
ಇತ್ತೀಚಿಗೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ʼಉಪೇಂದ್ರʼ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡು ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಎಲ್ಲಿ ನೋಡಿದ್ರೂ ಈ ಹಾಡಿನದ್ದೇ ಹವಾ. ಹೀಗಿರುವಾಗ ಈ ನಡುವೆ ಕರಿಮಣಿ ಮಾಲೀಕನ ಉತ್ತರ ಕರ್ನಾಟಕ ಶೈಲಿಯ ಜಾನಪದ ಸೊಗಡಿನ ಹಾಡೊಂದು ಕೂಡಾ ವೈರಲ್ ಆಗುತ್ತಿವೆ. ಜಾನಪದ ಗಾಯಕ ಶಬ್ಬೀರ್ ಡಾಂಗೆ (@shabbir_dange_official_) ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನ ರೀಲ್ಸ್ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ರೀಲ್ಸ್ ವಿಡಿಯೋದಲ್ಲಿ ಶಬ್ಬೀರ್ ಡಾಂಗೆ ಅವರು ಕರಿಮಣಿ ಮಾಲೀಕ ನಾನಲ್ಲಂತಿ. ಕರಿಮಣಿ ಮಾಲೀಕ ನಾನಲ್ಲಂತಿ ಅಂತೂ ಇಂತು ಮುಗಿಸ್ಯಾಕ ನಿಂತಿ ನನ್ನ ಸಂತಿ ಕರಿಮಣಿ ಮಾಲೀಕನ ಬದಲಿಸಬೇಕಂತಿ, ಎಷ್ಟು ದಿನದಿಂದ ಇಂತ ಹೊಂಚಾಕಿ ಕುಂತಿ ಎಂಬ ಜಾನಪದ ಗೀತೆಯನ್ನು ಹಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಿಮ್ಮ ಈ ಸಾಹಿತ್ಯ ಮತ್ತು ಗಾಯನ ನೋಡಲು ನಿಮ್ಮ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಯವಿಟ್ಟು ನಿಮ್ಮ ಗಾಯನ ಕಲೆಯನ್ನು ಹೀಗೆ ಮುಂದುವರೆಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಈ ಸುಮಧುರ ಕಂಠಕ್ಕೆ ಯಾರ ದೃಷ್ಟಿಯೂ ಬೀಳದಿರಲಿʼ ಎಂದು ಹಾರೈಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಪ್ಪಾ ಕರಿಮಣಿ ರೀಲ್ಸ್ ನೋಡಿ ಸಾಕಾಗಿತ್ತು, ಈಗ ನಿಮ್ಮ ಹಾಡು ಕೇಳಿ ಬಹಳ ಸಂತೋಷವಾಯಿತು ಸರ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಶಬ್ಬೀರ್ ಡಾಂಗೆ ಅವರ ಈ ಹಾಡಿಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.