ಬಳ್ಳಾರಿ, ಜ.25 : ಪ್ರಾಣ ಸ್ನೇಹಿತರು ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಕೊನೆಗೂ ಸ್ಫೋಟಗೊಂಡಿದೆ. ರೆಡ್ಡಿ ವಿರುದ್ಧ ಶ್ರೀರಾಮುಲು ಬಹಿರಂಗವಾಗಿಯೇ ಧ್ವನಿ ಎತ್ತಿರುವುದು, ಶ್ರೀರಾಮುಲು ಹೇಳಿಕೆಗೆ ಇದೀಗ ಜನಾರ್ದನರೆಡ್ಡಿ ಕೂಡ ತಿರುಗೇಟು ನೀಡಿದ್ದಾರೆ.
ಶ್ರೀರಾಮುಲು ಬೆಂಬಲಿಗರು ದೂರು ನೀಡಿರುವ ವಿಚಾರವಾಗಿ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನರೆಡ್ಡಿಯವರು, ‘ನಾನು ಸಿಬಿಐ ಪ್ರಕರಣವನ್ನು ನೋಡಿದ್ದೇನೆ ಇನ್ನು ಶ್ರೀರಾಮುಲು ಬೆಂಬಲಿಗರು ನನ್ನ ವಿರುದ್ಧ ನೀಡಿರುವ ದೂರು ಯಾವ ಲೆಕ್ಕ.ನಾನು ಯಾವುದೋ ದೂರಿಗೆ ಜಗ್ಗುವವನಲ್ಲ, ಹೆದರಲ್ಲ ಎನ್ನುವ ಮೂಲಕ ಶ್ರೀರಾಮುಲು ಬೆಂಬಲಿಗರಿಗೂ ತಿರುಗೇಟು ನೀಡಿದ್ದಾರೆ.
ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿಯವರು, ಯಾವುದೂ ರಹಸ್ಯವಾಗಿ ಉಳಿಯೊಲ್ಲ, ನಿಧಾನವಾಗಿ ಕಾಲಕ್ರಮೇಣ ಒಂದೊಂದಾಗಿ ರಹಸ್ಯ ಬಯಲಿಗೆ ಬರಲಿವೆ. ಶ್ರೀರಾಮುಲು ಆರೋಪಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಏನೇ ಇದ್ರೂ ಪಕ್ಷದ ವೇದಿಕೆಯಲ್ಲಿ ಮಾತಾಡ್ತೇನೆ. ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ, ಅಲ್ಲೇ ಮಾತಾಡ್ತೇನೆ. ನಾನು ಬಳ್ಳಾರಿಯಲ್ಲೇ ಇರುತ್ತೇನೆ. ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಇನ್ಮೇಲೆ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಜನಾರ್ದನರೆಡ್ಡಿ ಮನೆಗೆ ಹೋಗುವ ಮನೆ ಕಂಪೌಂಡ್ ಗೇಟ್ ಕ್ಲೋಸ್ ಮಾಡಿದ ವಿಚಾರ ಕೆದಕಿದ ಮಾಧ್ಯಮಗಳಿಗೆ ನೋ ರಿಯಾಕ್ಷನ್. ವಾಸ್ತು ಹೆಸರಲ್ಲಿ ಕ್ಲೋಸ್ ಮಾಡಿದ್ದಾರಲ್ವ? ವಾಸ್ತು ಸರಿ ಇಲ್ಲ ಅಂದ್ಮೇಲೆ ಮುಗಿತು ಅದರ ಬಗ್ಗೆ ಮಾತಾಡೋದೇನಿದೆ? ಅದನ್ನು ನಾವಾಗಲಿ, ನೀವಾಗಲಿ ಸರಿ ಮಾಡಿಕೊಳ್ಳಲೇಬೇಕಲ್ಲ ಎಂದು ಜನಾರ್ದನ ರೆಡ್ಡಿ ಮಾರ್ಮಿಕವಾಗಿ ಹೇಳಿದ್ದಾರೆ.
ಘಟನೆ ಹಿನ್ನೆಲೆ:
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಜರುಗಿದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಶ್ರೀರಾಮುಲು ಕಾರಣ ಎಂಬ ಆರೋಪ, ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಕಂದಕ ಸೃಷ್ಟಿಸಿದಂತಾಗಿದೆ.
ರಾಜಕೀಯೇತರ ಕಾರಣಗಳಿಂದಾಗಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದ ಬಳಿಕದ ಕೆಲವು ವ್ಯವಹಾರಿಕ ಬೆಳವಣಿಗೆಗಳು ಇಬ್ಬರ ನಡುವೆ ಭಿನ್ನಾಭಿಪ್ರಾಯ ಮತ್ತಷ್ಟು ಗಟ್ಟಿಗೊಂಡಿತ್ತಾದರೂ ತಮ್ಮ ನಡುವಿನ ಸ್ನೇಹ ಸ್ಥಿರವಾಗಿಯೇ ಇದೆ ಎಂಬಂತೆಯೇ ಈ ಇಬ್ಬರು ತೋರ್ಪಡಿಸಿಕೊಳ್ಳುತ್ತಿದ್ದರು.
ಸಂಡೂರು ಉಪ ಚುನಾವಣೆ: ಸಂಡೂರು ಉಪ ಚುನಾವಣೆ ಘೋಷಣೆ ವೇಳೆಯಲ್ಲಿಯೇ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ನ್ಯಾಯಾಲಯ ಅನುಮತಿ ನೀಡುತ್ತಿದ್ದಂತೆಯೇ ರೆಡ್ಡಿ ಚುನಾವಣೆ ಉಸ್ತುವಾರಿ ಹೊತ್ತು ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದರು. ರೆಡ್ಡಿ ನೇತೃತ್ವದಲ್ಲಿಯೇ ಚುನಾವಣೆ ನಡೆದಿದ್ದು ಶ್ರೀರಾಮುಲು ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿ ಬಂದಿದ್ದವು.
ಚುನಾವಣೆ ವೇಳೆ ಅಸಮಾಧಾನ ಸ್ಫೋಟದಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಶ್ರೀರಾಮುಲು ಬೆಂಬಲಿಗರು ಮೌನ ವಹಿಸಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಳಿಕ ರೆಡ್ಡಿ-ರಾಮುಲು ನಡುವಿನ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೂ ಕಾರಣ ಎಂದು ಬೊಟ್ಟು ಮಾಡಿ ತೋರಿಸಿರುವುದು ಶ್ರೀರಾಮುಲು ಅವರಿಗೆ ಜನಾರ್ದನ ರೆಡ್ಡಿ ಮೇಲಿನ ಸಿಟ್ಟು ರಟ್ಟಾಗುವಂತೆ ಮಾಡಿದೆ.