ಬೆಂಗಳೂರು, (ಏಪ್ರಿಲ್ 03): ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಬಿವೈ ವಿಜಯೇಂದ್ರ ಅವರಿಗೆ ಲೋಕಸಭಾ ಚುನಾವಣೆ ಎನ್ನುವ ಅಗ್ನಿ ಪರೀಕ್ಷೆ ಎದುರಾಗಿದೆ. ವಿಜಯೇಂದ್ರ ಸಹ ಮೊದಲ ಪರೀಕ್ಷೆಯಲ್ಲೇ ಗೆದ್ದು ಹೈಕಮಾಂಡ್ಗೆ ಕೊಡುಗೆಯಾಗಿ ನೀಡುವ ಯೋಚನೆಯಲ್ಲಿದ್ದಾರೆ. ಇದರ ಮಧ್ಯೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ರಾಜ್ಯಾಧ್ಯಕ್ಷ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಕಡಿಮೆ ಸ್ಥಾನ ಬಂದರೆ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಊಹಾಪೋಹ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಬದಲಾವಣೆ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರು, ಕಡಿಮೆ ಸ್ಥಾನ ಬಂದರೆ ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಊಹಾಪೋಹ. 28ಕ್ಕಿಂತ ಕಡಿಮೆ ಸೀಟು ನಾವು ಗೆಲ್ಲುವುದೇ ಇಲ್ಲ. ಒಂದು ಸೀಟು ಕೂಡಾ ಕಾಂಗ್ರೆಸ್ ಗೆಲ್ಲುವುದಿಲ್ಲ. ಈ ಬಾ ಐತಿಹಾಸಿಕ ಫಲಿತಾಂಶ ರಿ ಬರುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತದೆ. ಡಾ. ಮಂಜುನಾಥ್ ಜನಸೇವೆಯಲ್ಲಿ ಇಲ್ಲಿಯವರೆಗಿನ ಜೀವನ ಕಳೆದಿದ್ದಾರೆ. ಅತೀ ಹೆಚ್ಚು ಮತಗಳಿಂದ ಡಾ. ಮಂಜುನಾಥ್ ಗೆಲ್ಲುತ್ತಾರೆ. ಬೆಂಗಳೂರು ಗ್ರಾಮಾಂತರ ನಾವು ಗೆದ್ದ ಮೇಲೆ ಕಾಂಗ್ರೆಸ್ಗೆ ಏನೂ ಉಳಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ (ವಿಜಯೇಂದ್ರ) ಬದಲಾವಣೆಯಾಗುತ್ತೆ ಎಂದು ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಅಲ್ಲದೇ ಲೋಕಸಭೆ ಚುನಾವಣೆ ಬಳಿಕ ಬಹಳ ದೊಡ್ಡ ಬದಲಾವಣೆಯಾಗುತ್ತದೆ. ಬದಲಾವಣೆಯಾಗಬೇಕೆಂಬ ಕೂಗು ಕರ್ನಾಟಕ ಬಿಜೆಪಿಯಲ್ಲಿ ಏಳುತ್ತೆ. ನಾಯಕರು, ಕಾರ್ಯಕರ್ತರ ಜತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದರು.
ರಾಜ್ಯಾಧ್ಯಕ್ಷರ ಬದಲಾವಣೆ ಈಶ್ವರಪ್ಪ ಪಟ್ಟು
ಇನ್ನು ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧವೇ ಕೋಪಗೊಂಡಿದ್ದು, ಅಪ್ಪ-ಮಕ್ಕಳೇ ಟಿಕೆಟ್ ತಪ್ಪಿಸಿದ್ದಾರೆ ಎಂದು ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ಈಶ್ವರಪ್ಪ ಇದೀಗ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಆದ್ರೆ, ಬಿಜೆಪಿ ನಾಯಕರು ಈಶ್ವರಪ್ಪ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಇನ್ನು ಶಿವಮೊಗ್ಗ ಕಣದಿಂದ ಹಿಂದೆ ಸರಿಯಬೇಕಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಬದಲಾಯಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.