ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಸಿಲಿನ ಝಳ ಜೋರಾಗಿದೆ. ಹೀಗೆ ಮುಂದುವರೆದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಈ ಸುಡು ಬಿಸಿಲು ಹೆಚ್ಚಳವಾಗುವ ಸಾಧ್ಯತೆಯೇ ಹೆಚ್ಚು. ಉರಿ ಬಿಸಿಲು ಹಾಗೂ ಸೆಕೆಯನ್ನು ತಾಳಲಾರದೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ನೀರು ಹೆಚ್ಚಾಗಿ ಸೇವಿಸುವ ಜೊತೆಗೆ ಆಹಾರ ಪದಾರ್ಥಗಳ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಬೇಸಿಗೆಯ ಸಮಯದಲ್ಲಿ ನಿಮ್ಮ ಆಹಾರ ಕ್ರಮವು ಹೀಗಿದ್ದರೆ ಆರೋಗ್ಯಯುತವಾಗಿರಬಹುದು.
ಬೇಸಿಗೆ ಇನ್ನು ಆರಂಭವಾಗಿಲ್ಲ. ಆದರೆ ಸೂರ್ಯನು ತನ್ನ ಪ್ರಖರತೆಯನ್ನು ತೋರಿಸುತ್ತಿದ್ದಾನೆ. ಬೆಳಗ್ಗೆ ಎಂಟು ಗಂಟೆಯ ಬಳಿಕ ಹೊರಗೆ ಹೋಗುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಬಿಸಿಲು ನೆತ್ತಿಯನ್ನು ಸುಡುತ್ತದೆ. ಈ ಸಮಯದಲ್ಲಿ ಆರೋಗ್ಯವು ಕೈ ಕೊಡುವುದು ಸಹಜ. ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಿದರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಟ್ಟಂತೆ ಆಗುತ್ತದೆ, ಹೀಗಾಗಿ ದೇಹವನ್ನು ತಂಪಾಗಿಸಿರುವುದು ಮುಖ್ಯ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಂಶ ಹೆಚ್ಚಿರುವ ಆಹಾರಗಳು ಅಗತ್ಯವಾಗಿ ಬೇಕಾಗುತ್ತದೆ.
- ನೀರು ಕುಡಿಯಿರಿ : ಬೇಸಿಗೆಯಲ್ಲಿ ಬಿಸಿಲಿನ ಝಳವನ್ನು ಸಹಿಸಿಕೊಳ್ಳುವುದು ಕಷ್ಟ. ಹೊರಗಡೆ ಸುತ್ತಾಡಿಕೊಂಡು ಬಂದರೆ ಸಾಕು ಬಾಯಾರಿಕೆಯಾಗುತ್ತದೆ. ಬಿಸಿಲಿನ ತಾಪಕ್ಕೆ ದೇಹವು ನೀರು ಬೇಕಾಗುತ್ತದೆ. ಈ ಸಮಯದಲ್ಲಿ ತಣ್ಣನೆಯ ನೀರು ಅಥವಾ ತಂಪು ಪಾನೀಯಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
- ಟೊಮೆಟೊ : ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿರುವ ಈ ಟೊಮೊಟೊ ಬೇಸಿಗೆಗಾಲಕ್ಕೆ ಉತ್ತಮ ಆಹಾರವಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಯಿಂದ ದೂರವಿಡುತ್ತದೆ.
- ಕಲ್ಲಂಗಡಿ : ಇದು ಬೇಸಿಗೆ ಕಾಲದಲ್ಲಿ ಹೆಚ್ಚು ಜನರು ಸೇವಿಸುವ ಹಣ್ಣುಗಳಲ್ಲಿ ಒಂದು. ನೀರಿನ ಅಂಶ ಹೆಚ್ಚಾಗಿರುವ ಕಾರಣ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸಂಬಂಧಿ ರೋಗಗಳನ್ನೂ ದೂರ ಮಾಡಿ ನಿಮ್ಮನ್ನು ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
- ಕಿತ್ತಳೆ : ಕಿತ್ತಳೆಹಣ್ಣಿನಲ್ಲಿ ಸಿಹಿ ಸಿಟ್ರಸ್ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ನೀರಿನ ಪ್ರಮಾಣವು ಹೇರಳವಾಗಿದೆ. ಇದು ದೇಹದಲ್ಲಿನ ನಿರ್ಜಲೀಕರಣ ನಿವಾರಣೆ ಮಾಡಿ ಅನಾರೋಗ್ಯ ಸಮಸ್ಯೆಯಿಂದ ಕಾಪಾಡುತ್ತದೆ.
- ಮೊಸರು : ದೇಹವನ್ನು ತಂಪಾಗಿರಿಸಲು ಬೇಸಿಗೆಯ ಉತ್ತಮ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಹೆಚ್ಚಿನವರು ಮಧ್ಯಾಹ್ನದ ಊಟಕ್ಕೆ ಮೊಸರನ್ನು ಸೇವಿಸುತ್ತಾರೆ. ಇದು ದೇಹದ ಉಷ್ಟಾಂಶ ಸಮತೋಲನದಲ್ಲಿರಿಸಲು ಸಹಾಯಕವಾಗಿದೆ.
- ಎಳ ನೀರು : ಬಿಸಿಲಿನ ಝಳ ತಾಳಲಾರದೆ ತಂಪು ಪಾನೀಯವನ್ನು ಹೆಚ್ಚು ಸೇವಿಸಲು ಇಷ್ಟ ಪಡುತ್ತಾರೆ. ಆದರೆ ರಾಸಾಯನಿಕಗಳಿಂದ ಕೂಡಿದ ತಂಪು ಪಾನೀಯಗಳಿಗಿಂತ ಈ ಎಳನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.
- ಪುದೀನಾ : ದೇಹವನ್ನು ತಂಪಾಗಿಸುವ ಮತ್ತು ರಿಫ್ರೆಶ್ ಮಾಡುವ ಗುಣಗಳನ್ನು ಹೊಂದಿರುವ ಪುದೀನಾ ಬೇಸಿಗೆಯ ಹೇಳಿ ಮಾಡಿಸಿದ ಆಹಾರವಾಗಿದೆ. ಪುದೀನಾ ನಿಂಬು ಜ್ಯೂಸ್ ಅಥವಾ ಪುದೀನಾ ಚಹಾವನ್ನು ಮಾಡಿ ತಣ್ಣಗಾದ ಬಳಿಕ ಕುಡಿಯುವುದರಿಂದ ಆರೋಗ್ಯ ಲಾಭವನ್ನು ಪಡೆಯಬಹುದು.
- ಹಸಿರು ತರಕಾರಿ : ಹಸಿರು ತರಕಾರಿಗಳು ದೇಹಕ್ಕೆ ಅಗತ್ಯವಾಗಿ ಬೇಕು. ಬೇಸಿಗೆಯಲ್ಲಿ ಇದರ ನಿಯಮಿತ ಸೇವನೆಯಿಂದ ಆರೋಗ್ಯಯುತರಾಗಿರಬಹುದು. ಮೂಲಂಗಿ, ಕ್ಯಾರೆಟ್, ಸೌತೆಕಾಯಿ ಇನ್ನಿತ್ತರ ತರಕಾರಿಗಳನ್ನು ಸೇರಿಸಿ ಸಲಾಡ್ ತಯಾರಿಸಿ ಸೇವಿಸಿದರೆ ದೇಹವನ್ನು ತಂಪಾಗಿರಿಸಬಹುದು. ಅದಲ್ಲದೇ ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡುವ ಶಕ್ತಿ ಈ ಆಹಾರಕ್ಕಿದೆ.