ಬಳ್ಳಾರಿ,ಮಾ.26 :ಲೋಕಸಭಾ ಚುನಾವಣೆಯ ಸಂಬಂಧ 92-ಸಿರುಗುಪ್ಪ ಕ್ಷೇತ್ರದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಪರಿಣಾಮಕಾರಿ ಸ್ವೀಪ್ ಕಾರ್ಯಕ್ರಮ ಅನುμÁ್ಠನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯತ್ ಸಿರುಗುಪ್ಪ, ತಾಲ್ಲೂಕು ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಿರುಗುಪ್ಪ ತಾಪಂ ಸಭಾಂಗಣದಲ್ಲಿ ಬೂತ್ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಬಾರಿ ಕಡಿಮೆ ಮತದಾನಗೊಂಡ ವ್ಯಾಪ್ತಿಯ ಸಾರ್ವಜನಿಕರಲ್ಲಿ ನೈಜ ಮತದಾನದ ಅರಿವು ಮೂಡಿಸಬೇಕು. ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಸಮಿತಿಯಿಂದ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಬಿಎಲ್ಓ, ಎಆರ್ಓ, ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿದರು.
ವಿಶೇಷ ಚೇತನರು, ಹಿರಿಯ ನಾಗರಿಕರು, ತೃತೀಯಲಿಂಗಿಗಳು ಹಾಗೂ ವಲಸೆ ಕಾರ್ಮಿಕರು ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಗೊಳ್ಳುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳೂವಂತೆ ಸೂಚಿಸಿದರು.
ಮತದಾನಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ಸ್ವಿಪ್ ಚಟುವಟಿಕೆಗಳನ್ನು ನಡೆಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಜನಸಾಮಾನ್ಯರಿಗೆ ಮತದಾನದ ಮಹತ್ವದ ಬಗ್ಗೆ ಮತದಾನದ ಹಾಡುಗಳ ಬಗ್ಗೆ ಬೀದಿ ನಾಟಕ, ಕಿರು ನಾಟಕಗಳ ಮೂಲಕ ಜಾಗೃತಿಯನ್ನು ಮೂಡಿಸುವಂತೆ ಸಲಹೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನಸಾಮಾನ್ಯರಿಗೆ ಮನೆ ಮನೆಗಳಿಗೆ ತೆರಳಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು.
ಎಲ್ಲಾ ಸಮಿತಿ ಸದಸ್ಯರು ತಮಗೆ ವಹಿಸಿದ ಕಾರ್ಯಹಂಚಿಕೆ ವ್ಯಾಪ್ತಿಯಲ್ಲಿ ನಡೆಸುವ ಸ್ವೀಪ್ ಚಟುವಟಿಕೆಗಳ ಸಂಬಂಧ ಪ್ರತಿನಿತ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ತಹಶೀಲ್ದಾರ ವಿಶ್ವನಾಥ, ತಾಪಂ ಇಓ ಸೇರಿದಂತೆ ಬಿಎಲ್ಓ ಅಧಿಕಾರಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.