ಬೆಂಗಳೂರು, ಮಾರ್ಚ್ 29: ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ತಂತ್ರ-ಪ್ರತಿತಂತ್ರ ಜೋರಾಗುತ್ತಿದೆ. ರಾಜ್ಯದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಇದರ ಮಧ್ಯೆ ಇಂದು ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ (JDS) ಸಮನ್ವಯ ಸಭೆ ಮಾಡಲಾಗಿದೆ. ಸಭೆಯಲ್ಲಿ ಎರಡು ಪಕ್ಷದ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎನ್ಡಿಎ ಒಕ್ಕೂಟದ ರಾಜ್ಯಮಟ್ಟದ ಸಮನ್ವಯ ಸಮಿತಿ ರಚನೆಗೆ ತೀರ್ಮಾನ ಮಾಡಲಾಗಿದೆ. ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಭೆ ನಡೆಸುವಂತೆ ಸೂಚಿಸಲಾಗಿದೆ.
ಹೆಚ್ಡಿ ದೇವೇಗೌಡ ಕೊಟ್ಟ ಸಂದೇಶ ಕಾರ್ಯಕರ್ತರಿಗೆ ದೊಡ್ಡ ಶಕ್ತಿ ಬಂದಿದೆ: ಬಿವೈ ವಿಜಯೇಂದ್ರ
ಬಿಜೆಪಿ, ಜೆಡಿಎಸ್ ಸಮನ್ವಯ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ ಅವರು, ಹೆಚ್ಡಿ ದೇವೇಗೌಡ ಅವರು ಕೊಟ್ಟ ಸಂದೇಶ ಕಾರ್ಯಕರ್ತರಿಗೆ ದೊಡ್ಡ ಶಕ್ತಿ ಬಂದಿದೆ. ಇಂದಿನ ಸಭೆಯಿಂದ 2 ಪಕ್ಷದ ಕಾರ್ಯಕರ್ತರಿಗೆ ಆನೆ ಬಲ ಬಂದಿದೆ. ನಮ್ಮ ವೈಯಕ್ತಿಕ ಸಮಸ್ಯೆ ಏನೇ ಇದ್ದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ದೇಶಕ್ಕೋಸ್ಕರ ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಮಿತ್ ಶಾ ಬಗ್ಗೆ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯತೀಂದ್ರ ಯೋಗ್ಯತೆ ಏನು ಅಂತಾ ಅರ್ಥ ಮಾಡಿಕೊಳ್ಳಬೇಕು. ಸಿಎಂ ಮಗನಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಯಾರು ಗೂಂಡಾ ವರ್ತನೆ ಮಾಡ್ತಿದ್ದಾರೆಂದು ಜನರ ಕೇಳಿದ್ರೆ ಗೊತ್ತಾಗುತ್ತೆ. ಶಾಸಕರಾಗಿದ್ದವರು ಹೀಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ಸಂದೇಶ ನೀಡಿದ್ದೇವೆ: ಹೆಚ್.ಡಿ.ದೇವೇಗೌಡ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದ್ದು, ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ಸಂದೇಶ ನೀಡಿದ್ದೇವೆ. ಬಿಜೆಪಿ, ಜೆಡಿಎಸ್ ನಡುವೆ ಇದ್ದ ವ್ಯತ್ಯಾಸ ಮರೆತು ಕೆಲಸ ಮಾಡಬೇಕು. JDS ಬಗ್ಗೆ ಲಘುವಾಗಿ ಮಾತನಾಡಿದ ಕಾಂಗ್ರೆಸ್ಗೆ ಉತ್ತರ ಕೊಟ್ಟಿದ್ದೇನೆ. ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕೆಂದು ಸಂದೇಶ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸಮನ್ವಯ ಸಭೆಯ ನಿರ್ಧಾರಗಳು
- ಲೋಕಸಭಾ, ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿ ನೇಮಕ
- ಲೋಕಸಭಾ & ವಿಧಾನಸಭಾ ಕ್ಷೇತ್ರವಾರು ಸಮನ್ವಯ ಸಭೆ ನಡೆಸುವುದು
- ಕರಪತ್ರಗಳಲ್ಲಿ ಉಭಯ ಪಕ್ಷಗಳ ಚಿಹ್ನೆ, ಬಾವುಟ, ಫೋಟೋಗಳ ಬಳಕೆ
- ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ 2 ಪಕ್ಷಗಳ ಮುಖಂಡರು ಹಾಜರು
- ಉಭಯ ಪಕ್ಷಗಳ ಕಚೇರಿಗಳನ್ನು NDA ಕಾರ್ಯಾಲಯವಾಗಿ ಮಾರ್ಪಾಡು
- ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ ಮತ್ತು ಎರಡೂ ಪಕ್ಷಗಳ ಮುಖಂಡರ ಆಡಿಯೋ, ವೀಡಿಯೋ ಸಂದೇಶ ಬಳಕೆ