ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಫೆಬ್ರವರಿ 17 ರಂದು ಜಿಎಸ್ಎಲ್ ವಿ-ಎಫ್14/ ಇನ್ಸಾಟ್-3ಡಿಎಸ್ ಮಿಷನ್ ಅನ್ನು ಉಡಾವಣೆ ಮಾಡುವುದಾಗಿ ಪ್ರಕಟಿಸಿದೆ.
ISRO ತನ್ನ 16ನೇ ಮಿಷನ್ ಅನ್ನು ಶ್ರೀಹರಿಕೋಟಾದಿಂದ ಫೆಬ್ರವರಿ 17 ರಂದು ಸಂಜೆ 5.30 ಕ್ಕೆ ಉಡಾವಣೆಯಾಗಲಿದೆ ಎಂದು ಎಕ್ಸ್ ನಲ್ಲಿ ತಿಳಿಸಿದೆ. ಹವಾಮಾನ ಮತ್ತು ವಿಪತ್ತು ಎಚ್ಚರಿಕೆ ಮಾಹಿತಿ ನೀಡುವ ಉಪಗ್ರಹವನ್ನು ಈಗಾಗಲೇ ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ) ನಲ್ಲಿ ನಿಯೋಜಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ಉಪಗ್ರಹದ ಪ್ರಾಥಮಿಕ ಉದ್ದೇಶವು ಭೂಮಿಯ ಮೇಲ್ಮೈಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಹವಾಮಾನ ಪ್ರಾಮುಖ್ಯತೆಯನ್ನು ಹೊಂದಿರುವ ವಿವಿಧ ಸ್ಪೆಕ್ಟ್ರಲ್ ಚಾನಲ್ಗಳಲ್ಲಿ ಸಾಗರ ವೀಕ್ಷಣೆಗಳು ಮತ್ತು ವಾತಾವರಣದ ವಿವಿಧ ಹವಾಮಾನ ನಿಯತಾಂಕಗಳ ವಿವರಗಳನ್ನು ಸಹ ಒದಗಿಸುತ್ತದೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಸಹ ಸಹಾಯ ಮಾಡುತ್ತದೆ ಎಂದು ಇಸ್ರೋ ಸಂಶೋಧಕರು ಹೇಳಿದ್ದಾರೆ.
ಈ ಉಪಗ್ರಹವು ಒದಗಿಸಿದ ಮಾಹಿತಿಯನ್ನು ಐಎಮ್ಡಿ, ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ, ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರ ಸೇರಿದಂತೆ ಭೂ ವಿಜ್ಞಾನ ಸಚಿವಾಲಯದ ವಿವಿಧ ಇಲಾಖೆಗಳು ಬಳಸಲಿವೆ.