ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೦೩: ಗ್ರಾಮೀಣ ಜನರಿಗೆ ಉಪಯೋಗವಾಗಲೆಂದು ಗ್ರಾಮಗಳಲ್ಲಿ ಗ್ರಾಪಂ ಕಾರ್ಯಾಲಯವನ್ನು ನಿರ್ಮಾಣ ಮಾಡಲಾಗಿರುತ್ತದೆ, ಇದರಿಂದ ಗ್ರಾಮದ ಜನರು ಇದ್ದಲ್ಲಿಯೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ, ಆದರೆ ಕೆಲವು ಗ್ರಾಪಂ ಕಾರ್ಯಾಲಯಗಳು ಗ್ರಾಮಸ್ಥರ ತೊಂದರೆ ಆಲಿಸದೆ ಇರುವುದು ಇತ್ತಿಚಿಗೆ ಸಾಮಾನ್ಯವಾಗಿದೆ, ಇದೇ ಸಾಲಿಗೆ ತಾಲೂಕಿನ ಕಾರೇಕಲ್ಲು ಗ್ರಾಮದ ಕಾರ್ಯಾಲಯ ಹೊರತಾಗಿಲ್ಲ, ಹೊಸವರ್ಷಾಚರಣೆಯ ನೆಪವೂಡ್ಡಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಕರ್ನಾಟಕದ ಗಡಿಗ್ರಾಮವಾದ ಕಾರೇಕಲ್ಲು ಗ್ರಾಮ ಪಂಚಾಯಿತು ವ್ಯಾಪ್ತಿಯಲ್ಲಿ ಜಿ.ನಾಗೇನಹಳ್ಳಿ, ಬ್ಯಾಲಚಿಂತಾ, ಡಿ. ನಾಗೇನಹಳ್ಳಿ, ತಂಭ್ರಹಳ್ಳಿ ಸೇರಿದಂತೆ ೧೭ ಗ್ರಾಪಂ ಸದಸ್ಯರ ಸಂಖ್ಯಾಬಲ ಹೊಂದಿದ್ದರು ಸಹ ಅಭಿವೃದ್ಧಿಯಲ್ಲಿ ಹಿಂದೂಳಿದಿದೆ. ಆಯಾ ಗ್ರಾಮಗಳಲ್ಲಿ ಸ್ವಚ್ಚತೆ, ಕುಡಿಯುವ ನೀರು, ವಿದ್ಯುತ್ ಅವ್ಯವಸ್ಥೆ, ರಸ್ತೆಗಳು, ನರೇಗಾ ಕೆಲಸ ಸೇರಿದಂತೆ ಮತ್ತಿತರ ಅಭಿವೃದ್ಧಿ ಕೆಲಸಗಳ ಮರಿಚೀಕೆಯಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿಸಿಲಹಳ್ಳಿ ರುದ್ರಪ್ಪ ರಜೆ ನೆಪ ಹೇಳಿ ತಮ್ಮ ಜೊತೆಗೆ ಅಧ್ಯಕ್ಷರು ಹಾಗೂ ಬಿಲ್ ಕಲೆಕ್ಟರ್ ಎ ಎಸ್ ಕುಮಾರ್, ಜವಾನ ಉಮೇಶ್ ಮತ್ತಿತರ ಸಿಬ್ಬಂದಿ, ಹಾಗೂ ಅವರ ಕುಟುಂಬದವರ ಜೊತೆಯಲ್ಲಿ ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದಾಗಿ ಗ್ರಾಮಸ್ಥರ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜೆ ಮೇಲೆ ತೆರಳಲು ಬಳ್ಳಾರಿ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣೆ ಅಧಿಕಾರಿ (ಇಒ) ಅನುಮತಿ ಅಗತ್ಯವಿದೆ. ಯಾವುದೇ ಗ್ರಾಮ ಪಂಚಾಯಿತಿ ಸಿಬ್ಬಂದಿ ರಜೆ ಮೇಲೆ ತೆರಳಿದರೆ ಪಿಡಿಒ ಅನುಮತಿ ಪಡೆಯಬೇಕು. ಆದರೆ ಕರೆಕಲ್ಲು ಪಿಡಿಒ ರಜೆ ತೆಗೆದುಕೊಳ್ಳದೆ ಬೇರೆಯವರಿಗೆ ಜವಾಬ್ದಾರಿ ಹಸ್ತಾಂತರಿಸದೆ ಹಿಂದೆ ಬಿದ್ದಿದ್ದಾರೆ. ಪಂಚಾಯಿತಿ ಇಒ ಅವರ ಆಶೀರ್ವಾದ ಹೇರಳವಾಗಿ ಇರುವುದರಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಯೂ ಪಿಡಿಒ ಜತೆ ವಿಹಾರಕ್ಕೆ ತೆರಳುತ್ತಾರೆ. ತಾಲೂಕಾ ಪಂಚಾಯತಿ ಇಒ ಅಧಿಕಾರಿ, ಪಿಡಿಒ ಹಾಗೂ ಸಿಬ್ಬಂದಿಗೆ ಹೇಳದೆ ಯಾವ ರೀತಿಯ ವಂಚನೆಯ ಗುತ್ತಿಗೆಗಳು ನಡೆಯುತ್ತಿವೆ ಎಂಬುದು ಗೊತ್ತಾಗಿದೆ ಎಂದು ಕಾರೇಕಲ್ಲು ಗ್ರಾಮದ ಜನರು ಆರೋಪಿಸಿದ್ದಾರೆ. ಪಿಡಿಒ ಹಾಗೂ ಸಿಬ್ಬಂದಿಯನ್ನು ಇಒ ಹಿಂದಕ್ಕೆ ತಳ್ಳುತ್ತಿರುವಂತಿದೆ. ಡಿಸೆಂಬರ್ ೩೧ರ ಭಾನುವಾರ ಹೊರತು ಪಡಿಸಿ ಜನವರಿ ೬ರವರೆಗೆ ಹೊಸ ವರ್ಷದವರೆಗೆ ಯಾವುದೇ ಸಾರ್ವಜನಿಕ ರಜೆ ಇಲ್ಲ ಯಾವ ರಜೆಯಲ್ಲಿ ಕರೆಕಲ್ಲು ಪಿಡಿಒ ಸಿಬ್ಬಂದಿ ಪ್ರವಾಸ ಯಾತ್ರೆಗೆ ತೆರಳಿದ್ದಾರೆ ಎಂಬುದು ಕಾರೇಕಲ್ಲು ಗ್ರಾಮದ ಜನರ ಆಗ್ರಹ. ಜನರಿಗೆ ಸೇವೆ ನೀಡಬೇಕಾದ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರಕಾರಿ ಸಿಬ್ಬಂದಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಕಾರೇಕಲ್ಲು ಗ್ರಾ.ಪಂ.ಪಿಡಿಒ ಹಾಗೂ ಸಿಬ್ಬಂದಿ ಕರ್ತವ್ಯ ಲೋಪವನ್ನು ತೋರಿಸುತ್ತದೆ ಎಂದು ಕಾರೇಕಲ್ಲು ಗ್ರಾಮದ ಜನರು ಹೇಳಿದ್ದಾರೆ.
ಹಾಜರಾತಿ ಪುಸ್ತಕ ಖಾಲಿ-ಖಾಲಿ:
ಗ್ರಾಮಸ್ಥರ ಆರೋಪಕ್ಕೆ ಪೂರಕವಾಗಿರುವಂತೆ ಜನವರಿ ಒಂದನೇ ತಾರೀಕಿನಿಂದ ಕಚೇರಿಯ ಹಾಜರಾತಿ ಪುಸ್ತಕದಲ್ಲಿ ಸಿಬ್ಬಂದಿಯ ಸಹಿ ಇಲ್ಲದೇ ಇರುವುದು ಗ್ರಾಮಸ್ಥರ ಆರೋಪಕ್ಕೆ ಸಾಕ್ಷಿಯಂತಿದೆ. ಪಿಡಿಒ ಸೇರಿದಂತೆ ಕರ ವಸೂಲುಗಾರ, ಲೆಕ್ಕ ಪರಿಶೋಧಕ, ಜವಾನ ಮತ್ತಿತರ ಸಿಬ್ಬಂದಿಯ ಸಹಿ ಹಾಜರಾತಿ ಪುಸ್ತಕದಲ್ಲಿ ಇಲ್ಲದೇ ಇರುವುದು ಅಧಿಕಾರಿಗಳ ಕೆಲಸಕ್ಕೆ ಕನ್ನಡಿ ಹಿಡಿದಂತಿದೆ.
ಸಿಬ್ಬAದಿಗಳೇಲ್ಲ ಒಂದೇ ಗ್ರಾಮದವರು:
ಅಸ್ತವ್ಯಸ್ತಕ್ಕೆ ಕಾರಣವಾಗಿರುವ ಕಾರೇಕಲ್ಲು ಗ್ರಾಮ ಪಂಚಾಯಿತಿಯಲ್ಲಿರುವ ಹೆಚ್ಚಿನ ಸಿಬ್ಬಂದಿ ಒಂದೇ ಗ್ರಾಮಸ್ಥರಾಗಿರುವುದು ವಿಪರ್ಯಾಸವಾಗಿದೆ. ಡಾಟಾ ಆಪರೇಟರ್ ಸೂರ್ಯನಾರಾಯಣ, ಬಿಲ್ ಕಲೆಕ್ಟರ್ ಕುಮಾರ್, ಜವಾನ ಉಮೇಶ್, ಕಾಯಕ ಮಿತ್ರ ಲಕ್ಷಿö್ಮÃ, ಬಿಲ್ ಕಲೆಕ್ಟರ್ ಕುಮಾರ್ರ ಪತ್ನಿ ಉಮಾ ಸಹ ಬ್ಯಾಲಚಿಂತಾ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಒಂದೇ ಗ್ರಾಮಕ್ಕೆ ಸೇರಿದವರಿಗೆ ಕಾರ್ಯಾಲಯದ ಎಲ್ಲಾ ಹುದ್ದೆಗಳು ಹಂಚಿಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಹೆಚ್ಚಿದ ನೀರಿನ ಆಭಾವ:
ಕಳೆದ ೭ ದಿನಗಳಿಂದ ಕಾರೇಕಲ್ಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಯಾಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯಕ್ಕಾಗಿ ಅಧಿಕಾರಿಗಳನ್ನು ಸಂರ್ಪಕಿಸಲು ಗ್ರಾಮಸ್ಥರು ಕಚೇರಿಗೆ ಹೋದರೆ ಕಾರ್ಯಾಲಯಕ್ಕೆ ಬೀಗ ಹಾಕಿದ್ದಾರೆ, ನಮ್ಮ ಸಮಸ್ಯೆ ಕೇಳುವವರು ಯಾರು? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸವರ್ಷಾಚರಣೆ ಪ್ರವಾಸವೆಂದು ಸತತ ಮೂರು ದಿನಗಳಿಂದ ಸಿಬ್ಬಂದಿ ಇಲ್ಲದೇ ಇರುವುದರಿಂದ ಸಮಸ್ಯೆಗಳನ್ನು ಪರಿಹರಿಸುವವರು ಯಾರು? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರೇಕಲ್ಲು ಗ್ರಾಮ ಪಂಚಾಯಿತಿ ಪಿಡಿಒರುದ್ರಪ್ಪ ಸೇರಿದಂತೆ ಸಿಬ್ಬಂದಿ ಪ್ರವಾಸದ ಕುರಿತು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಮಹಮ್ಮದ್ ಗೌಸ್ರನ್ನು ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಆಗು-ಹೋಗುಗಳು ನನಗೆ ಎನು ತಿಳಿದಿಲ್ಲ ಎಂದು ಬೇಜಾವ್ದಾರಿ ಮಾತುಗಳನ್ನಾಡುತ್ತಾರೆ. ಕೆಲಸದಲ್ಲಿ ನಿರ್ಲಕ್ಷö್ಯ ತೋರಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆಗೆ ಕೈಗೊಳ್ಳುವುದಾಗಿ ಗ್ರಾಮಸ್ಥರು ತಿಳಿಸಿದರು.