ಬಳ್ಳಾರಿ,ಜ.09 : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು, ಗುರುವಾರ ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆ, ಜಿಲ್ಲಾ ಕೇಂದ್ರ ಕಾರಾಗೃಹ, ಬಿಮ್ಸ್ ಆಸ್ಪತ್ರೆ, ಸರ್ಕಾರಿ ಬುದ್ಧಿಮಾಂದ್ಯ ಬಾಲಕರ ಬಾಲಮಂದಿರ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
*ಜಿಲ್ಲಾ ಆಸ್ಪತ್ರೆ:*
ಮೊದಲಿಗೆ ಜಿಲ್ಲಾ ಆಸ್ಪತ್ರೆ ಆವರಣದ 100ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಒಬಿಜಿ ವಾರ್ಡ್, ಪ್ರಸೂತಿ ವಿಭಾಗದ ಮುಂದೆ ಇದ್ದ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ? ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬ ತೋರುತ್ತಿದ್ದಾರೆಯೇ? ಎಂದು ವಿಚಾರಿಸಿದರು.
ಹೆರಿಗೆ ಕೋಣೆಗೆ ಭೇಟಿದ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಹೆರಿಗೆ ವಾರ್ಡ್ಗಳಲ್ಲಿ ಸ್ವಚ್ಛತೆ ಆದ್ಯತೆ ನೀಡುವಂತೆ ಸೂಚಿಸಿದರು. ಬಳಿಕ ಔಷಧಿ ವಿತರಣಾ ವಿಭಾಗಕ್ಕೆ ಭೇಟಿ ನೀಡಿ, ವಿವಿಧ ರೀತಿಯ ಎಲ್ಲಾ ಔಷಧಿಗಳು ಲಭ್ಯವಿದೆಯೇ? ಅವಧಿ ಮೀರಿದ ಔಷಧಿಗಳನ್ನು ವಿತರಿಸುವಂತಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಜಿಲ್ಲಾ ಕೇಂದ್ರ ಕಾರಾಗೃಹ:*
ನಗರದ ಎಸ್.ಪಿ ಕಚೇರಿ ಹಿಂಭಾಗದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕಾರಾಗೃಹದಲ್ಲಿನ ಊಟ ತಯಾರಿಕಾ ಸ್ಥಳ ಅಡುಗೆ ಕೋಣೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ವಿಚಾರಣಾದೀನಾ ಕೈದಿಗಳಿಗೆ ನೀಡುವ ಉಪಹಾರ, ಊಟ, ಕುಡಿಯುವ ನೀರಿನ ಗುಣಮಟ್ಟದ ಕುರಿತು ಚರ್ಚಿಸಿದ ಅವರು, ವೇಳಾಪಟ್ಟಿಯಂತೆ ಆಹಾರ ವಿತರಣೆ ಮಾಡಲಾಗುತ್ತಿದೆಯೇ ಎಂದು ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಜೈಲಿನ ಸುರಕ್ಷತೆ ಕುರಿತು ಮಾಹಿತಿ ಪಡೆದ ಅಧ್ಯಕ್ಷರು, ಜೈಲಿನಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆ ಹೆಚ್ಚಿಸಲು ಸಲಹೆ ನೀಡಿದರು, ಅಲ್ಲದೆ ಅನಾರೋಗ್ಯಕ್ಕೆ ತುತ್ತಾಗುವ ಜೈಲುವಾಸಿಗಳು ಔಷಧಿಯನ್ನು ಸಿಬ್ಬಂದಿಗಳ ಸಮಕ್ಷಮವೇ ಸೇವಿಸಬೇಕು, ಔಷಧಿ ಸೇವಿಸದೆ, ಹಾಗೆಯೇ ಇರಿಸಿಕೊಂಡು, ಒಂದೇ ಬಾರಿ ಎಲ್ಲ ಔಷಧಿ ಸೇವಿಸಿದರೂ ಕೂಡ ಅವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕಾರಾಗೃಹದಲ್ಲಿ ಧ್ಯಾನ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಬೇಕು, ಜೈಲುವಾಸಿಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜೈಲು ಅಧೀಕ್ಷಕರಾದ ಲತಾ ಅವರು ಉಪಸ್ಥಿತರಿದ್ದು, ಜೈಲಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜೈಲಿನಲ್ಲಿದ್ದ ವಿವಿಧ ಪ್ರಕರಣಗಳಲ್ಲಿ ಜೈಲುವಾಸಿಗಳಾಗಿರುವ ಕೈದಿಗಳನ್ನು ಭೇಟಿಯಾಗಿ, ಕೈದಿಗಳಿಗೆ ಕಾನೂನು ನೆರವು ದೊರೆಯುತ್ತಿರುವ ಬಗ್ಗೆ, ಊಟೋಪಹಾರದ ಬಗ್ಗೆ ಜೈಲಿನ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಪಡೆದ ಆಯೋಗದ ಅಧ್ಯಕ್ಷರು ಹಾಗೂ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಗೋಡಿ ಅವರು, ಜೈಲಿನಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಿಸುವುದು ಹಾಗೂ ಕಿಟಕಿಗಳಿಗೆ ಸೊಳ್ಳೆಗಳು ಜೈಲು ಕೋಣೆಗಳನ್ನು ಪ್ರವೇಶಿಸದಂತೆ ಪರದೆಯನ್ನು ಹಾಕಿಸಲು ಸಲಹೆ ನೀಡಿದರು.
*ಬಿಮ್ಸ್ ಆಸ್ಪತ್ರೆ:*
ಬಳಿಕ, ಬಳ್ಳಾರಿ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯ ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ, ಹೊರರೋಗಿ ಮತ್ತು ಒಳರೋಗಿಗಳ ಬಳಿ ಸಂವಾದ ನಡೆಸಿದರು. ಆರೋಗ್ಯ ಸೇವೆ ನೀಡುವಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆಯೇ? ಎಂದು ವಿಚಾರಿಸಿದರು. ಬಳಿಕ ಬಿಮ್ಸ್ನ ಹೆರಿಗೆ ಕೋಣೆ ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದರು.
*ಬುದ್ಧಿಮಾಂದ್ಯ ಬಾಲಕರ ಸರ್ಕಾರಿ ಬಾಲಮಂದಿರ:*
ನಗರದ ಕಂಟೋನ್ಮೆAಟ್ನ ಶಾಂತಿಧಾಮ ಆವರಣದ ಬುದ್ಧಿಮಾಂದ್ಯ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಭೇಟಿ ನೀಡಿದರು.
ಬಾಲಮಂದಿರದಲ್ಲಿ ದಾಖಲಾದ ಮಕ್ಕಳ ವಿವರ ಪಡೆದುಕೊಂಡರು. ಮಕ್ಕಳನ್ನು ಕಾಲಾನುಮಿತಿಯಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಬಾಲಮಂದಿರವನ್ನು ಸ್ವಚ್ಛವಾಗಿರಿಸಬೇಕು, ರಕ್ಷಣೆ ಸೇವೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಬಾರದು ಎಂದು ಬಾಲಮಂದಿರದ ಅಧೀಕ್ಷಕರಿಗೆ ಸೂಚಿಸಿದರು.
*ನಿರಾಶ್ರಿತರ ಪರಿಹಾರ ಕೇಂದ್ರ:*
ಬಳಿಕ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಶಾಂತಿಧಾಮ ಆವರಣದ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತ ಪರಿಹಾರ ಕೇಂದ್ರದ ಪುರುಷರ ವಿಭಾಗ ಹಾಗೂ ಮಹಿಳಾ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಊಟ, ವಸತಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ವಿಚಾರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಆಪ್ತ ಕಾರ್ಯದರ್ಶಿ ಅರುಣ ಪೂಜಾರ ಅವರು ಅಧ್ಯಕ್ಷರೊಂದಿಗೆ ಉಪಸ್ಥಿತರಿದ್ದು, ಹಲವಾರು ಉಪಯುಕ್ತ ಸಲಹೆ ಸೂಚನೆಗಳನ್ನು ಇಲಾಖಾಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ತಹಶೀಲ್ದಾರ ಗುರುರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಸದಸ್ಯರು
ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಅಧಿಕಾರಿಗಳ ನೈತಿಕ ಜವಾಬ್ದಾರಿ: ಟಿ.ಶ್ಯಾಮ್ ಭಟ್
ಮಾನವ ಹಕ್ಕುಗಳ ಉಲ್ಲಂಘನೆಯಾಗದAತೆ ನೋಡಿಕೊಳ್ಳುವುದು. ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ನೈತಿಕ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅವರು ಹೇಳಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.
ಸರ್ಕಾರವು ವಿವಿಧ ಇಲಾಖೆಗಳಿಂದ ನೀಡುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕು. ಇಲ್ಲದಿದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾದAತಾಗುತ್ತದೆ. ಮಾನವ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾಯುವುದು ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವಾಗ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸೌಲಭ್ಯಗಳನ್ನು ತಲುಪಿಸುವಾಗ ವಿನಾಕಾರಣ ವಿಳಂಬ ಮಾಡಿದರೆ ಅಥವಾ ಸೌಲಭ್ಯಗಳನ್ನು ಒದಗಿಸದೇ ಇದ್ದಲ್ಲಿ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದರು.
ಕಾನೂನಿನಡಿ ಎಲ್ಲಾ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನೊಂದ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಮೇಲೆ ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥ ಪಡಿಸುವಾಗ ಸಂಬAಧಿತ ಅಧಿಕಾರಿಗಳಿಂದ ವರದಿ ಪಡೆದು ತನಿಖೆ ನಡೆಸಲಾಗುವುದು. ದೂರುಗಳು ಬಂದಾಗ ಸೂಕ್ತ ಮಾಹಿತಿ ಒದಗಿಸಬೇಕು. ಇನ್ನಷ್ಟು ದೂರುಗಳಿಗೆ ಆಸ್ಪದ ನೀಡದೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು.
ಈ ಮೊದಲು ದೂರು ಕೊಟ್ಟವರು ಪರಿಹಾರಕ್ಕಾಗಿ ಬೆಂಗಳೂರಿಗೆ ಹೋಗುವ ಪರಿಪಾಠ ಇತ್ತು. ಆದರೆ ಇದೀಗ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳು ಯಾವ ರೀತಿ ಸಾರ್ವಜನಿಕರಿಗೆ ತಲುಪುತ್ತಿವೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲು ಆಯೋಗವೇ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಭೇಟಿ ನೀಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ವತಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ಜನನದಿಂದ ಬರುವ ಎಲ್ಲ ಹಕ್ಕುಗಳು ಮಾನವ ಹಕ್ಕುಗಳಾಗುತ್ತದೆ. ಬದುಕುವ ಹಕ್ಕು, ಸಮಾನತೆ ಹಕ್ಕು, ಗೌರವಯುತವಾಗಿ ಬಾಳುವ ಹಕ್ಕು, ವಾಸಿಸುವ ಹಕ್ಕು, ಅಭಿವ್ಯಕ್ತಿ ಹಕ್ಕು, ಶೋಷಣೆ ವಿರುದ್ಧದ ಹಕ್ಕು ಸೇರಿದಂತೆ ಮೊದಲಾದ ಹಕ್ಕುಗಳು ಸಂವಿಧಾನದ ಮೂಲಭೂತ ಹಕ್ಕುಗಳನ್ನಾಗಿ ಮಾಡಲಾಗಿದೆ. ಈ ಹಕ್ಕುಗಳಿಗೆ ಧಕ್ಕೆಯಾದಾಗ ಅವುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಉಲ್ಲಂಘನೆಯಾಗದAತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಸ್ವಚ್ಛ ಪರಿಸರ ಹೊಂದುವ ಹಕ್ಕು ಕೂಡ ಎಲ್ಲಾ ಸಾರ್ವಜನಿಕರ ಹಕ್ಕು, ಅದನ್ನು ಒದಗಿಸದಿದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಕುರಿತು ಸಂಬAಧಿತ ಇಲಾಖೆಗಳ ವಿರುದ್ಧ ದೂರು ಸಲ್ಲಿಸಬಹುದಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಾಗ ಕರ್ತವ್ಯ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ವಿವಿಧೆಡೆ ಗ್ರಾಮಗಳಲ್ಲಿ ಈವರೆಗೂ ಅನಿಷ್ಠ ಪದ್ಧತಿಗಳನ್ನು ಅನುಸರಿಸುವುದು ಕಂಡುಬರುತ್ತಿದ್ದು, ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಿಂಬಿಸುತ್ತದೆ. ಮಾನವ ಹಕ್ಕುಗಳನ್ನು ಸಂರಕ್ಷಿಸಲು ಬೇಕಾಗಿರುವುದು ಮುಖ್ಯವಾಗಿ ಮಾನವೀಯತೆ. ಹಾಗಾಗಿ ಅಧಿಕಾರಿಗಳು ಮಾನವೀಯತೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ.ವಿ.ಜೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.