ಬಳ್ಳಾರಿ : ನಮ್ಮ ಕೌಟುಂಬಿಕ ಕಲಹ ಆಸ್ತಿ ಕಲಹವಾಗಿ ಮಾರ್ಪಟ್ಟು ನನ್ನ ಇಬ್ಬರು ಕಿರಿಯ ಮಕ್ಕಳಾದ ವಾಸುದೇವ ಮತ್ತು ಪುರುಷೋತ್ತಮ ಇವರು ನನ್ನನ್ನು, ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಬಡಿದು ಕೊಲೆ ಮಾಡಲು ಯತ್ನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ, ಕಳೆದ ಎರಡು ಮೂರು ತಿಂಗಳಿನಿಂದ ನಾವು
ಬಳ್ಳಾರಿಯಲ್ಲಿನ ಕೋಟೆಯ ಪ್ರದೇಶದ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡುತ್ತಾ ಇದ್ದೇವೆ. ಘಟನೆಯ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದೆ ಹಲ್ಲೇಕೊರರ ಜೊತೆ ಶಾಮೀಲಾಗಿ ದೂರು ನೀಡಲು ಹೋದ ನನ್ನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿರಿಯ ನಾಗರಿಕರಾದ ನನಗೆ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು ಅವಮಾನ ಮಾಡಿರುತ್ತಾರೆ ಎಂದು ಹಿರಿಯ ನಾಗರಿಕ ಗಾರೆ ಕೆಲಸದ ಈರಣ್ಣ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ತನ್ನ ಹಿರಿಯ ಮಗ ನರಸಿಂಹಲು ಇಬ್ಬರು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ಹಾಗೂ ಸೊಸೆಯಾದ ಲಕ್ಷ್ಮಿ ದೇವಿ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ
ನಮ್ಮ ಕುಟುಂಬದಲ್ಲಿ ಕುಟುಂಬ ಕಲಹವಾಗಿ ನಂತರ ಅದು ಆಸ್ತಿ ವಿವಾದಕ್ಕೆ ತಿರುಗಿದೆ. ನನ್ನ ಇಬ್ಬರು ಕಿರಿಯ ಗಂಡು ಮಕ್ಕಳಾದ ಪುರುಷೋತ್ತಮ ಮತ್ತು ವಾಸುದೇವ ಎಂಬುವವರು ನನ್ನ ಮೇಲೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಪದೇಪದೇ ದೈಹಿಕ ಹಲ್ಲೆ ಮಾಡುವುದು ಸೇರಿದಂತೆ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಕೊಲೆ ಯತ್ನ ನಡೆಸಿರುತ್ತಾರೆ.
ಈ ಘಟನೆ ಕುರಿತು ನಾನು ಮತ್ತು ನನ್ನ ಮಕ್ಕಳು ಕೌಲ್ ಬಜಾರ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿನ ಉನ್ನತ ಅಧಿಕಾರಿಯೊಬ್ಬರು ನಮಗೆ ನ್ಯಾಯ ಕೊಡಿಸದೆ ನಮ್ಮನ್ನೇ ಅವಾಚ್ಯವಾಗಿ ನಿಂದಿಸಿ ಅವಮಾನಕರ ಬೈಗಳನ್ನು ಬೈಯುತ್ತಾ ಹಿರಿಯ ನಾಗರಿಕರೆನ್ನದೆ ನನ್ನನ್ನು ಅವಮಾನಿಸಿರುತ್ತಾರೆ. ಅಷ್ಟೇ ಅಲ್ಲದೆ ನನ್ನನ್ನು ಕುರಿತು ಅವರು, ನಿನ್ನ ಆಸ್ತಿಯನ್ನು ನನಗಾದರೂ ಕೊಡು ನಾನು ಎಲ್ಲರಿಗೂ ಸಮಪಾಲಾಗಿ ಹಂಚಿ ವ್ಯಾಜ್ಯವನ್ನು ಪರಿಹರಿಸುತ್ತೇನೆ ಇಲ್ಲವಾದರೂ ಎಲ್ಲಿಗಾದರೂ ಹೋಗಿ ಸಾಯಿರಿ ನಮ್ಮ ಠಾಣೆಗೆ ಪದೇ ಪದೇ ಬರಬೇಡಿ ಎಂದು ನನ್ನನ್ನು ಗದರಿಸಿ ಕಳುಹಿಸುತ್ತಾರೆ ಎಂದು ಹಿರಿಯ ನಾಗರಿಕ ಈರಣ್ಣ ಗೋಷ್ಠಿಯಲ್ಲಿ ಕಣ್ಣೀರು ಸುರಿಸಿದರು.
ಅಷ್ಟೇ ಅಲ್ಲದೆ ಠಾಣೆಯ ಹೊಂದಿಬ್ಬರು ಪೇದೆಗಳು ನಮ್ಮ ಸಾಹೇಬರಿಗೆ ಹಣ ಕೊಟ್ಟಲ್ಲಿ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಹಣ ತೆಗೆದುಕೊಂಡು ಬನ್ನಿ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ನಮಗೆ ಲಂಚದ ಬೇಡಿಕೆ ಇಟ್ಟಿರುತ್ತಾರೆ, ಆದರೆ ನಮ್ಮ ಹತ್ತಿರ ಹಣವಿಲ್ಲದಿದ್ದರಿಂದ ನಾವು ಲಂಚ ಕೊಡಲು ಸಾಧ್ಯವಾಗಿಲ್ಲ. ನಮ್ಮ ಕುಟುಂಬಕ್ಕಾದ ಅನ್ಯಾಯ ಮತ್ತು ಈ ಘಟನೆಯ ಕುರಿತು ನಾವು ಲೋಕಾಯುಕ್ತ ಅದಾಲತ್ ನಲ್ಲಿ ನಮಗೆ ನ್ಯಾಯ ಕೊಡಿಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದಾಗ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿರುತ್ತಾರೆ.
ಆದರೂ ನಮಗೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಕಾರಣ ನೀವಾದರೂ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕೆಂದು ಅಲವತ್ತು ಕೊಂಡರು.
ಈ ಸಂದರ್ಭದಲ್ಲಿ ಈರಣ್ಣ ಅವರ ಹಿರಿಯ ಮಗ ನರಸಿಂಹಲು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ನರಸಿಂಹಲು ಪತ್ನಿ, ಲಕ್ಷ್ಮಿ ದೇವಿ, ಅವರ ಕುಟುಂಬ ಸ್ನೇಹಿತರಾದ ಸ್ವಾಮಿ ರೆಡ್ಡಿ ಅಂದ್ರಾಳ್, ದೊಡ್ಡಬಸಪ್ಪ ಸೇರಿದಂತೆ ಮತ್ತಿತರರು ಇದ್ದರು.