ಬಳ್ಳಾರಿ: ಮೆಗಾ ಡೈರಿ ಸ್ಥಾಪನೆ ವಿಚಾದರಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ರಾಜಕಾರಣ ಮಾಡುವುದು ಸರಿಯಲ್ಲ, ವಿಜಯನಗರದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಅಲ್ಲಿನ ರೈತರನ್ನು ಪ್ರತಿಭಟನೆಗೆ ಇಳಿಸಿದ್ದಾರೆ, ನಾವು ರೀತಿ ಮಾಡೋಲ್ಲ, ನಮ್ಮ ಸಂಸ್ಕೃತಿನೇ ಬೇರೆ, ವಿಜಯನಗರ ರೈತರು ನಮ್ಮವರೇ, ಬಳ್ಳಾರಿಯ ರೈತರು ನಮ್ಮವರೇ ಯಾರಿಗೂ ಅನ್ಯಾಯವಾಗಬಾರದು ಎನ್ನುವ ಅಭಿಪ್ರಾಯ ನಮ್ಮದು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಳ್ಳಾರಿಯಲ್ಲಿ ಹಾಲೂ ಉತ್ಪಾದಕ ಸೊಸೈಟಿಗಳು ಕಡಿಮೆ ಇವೆ, ಅತಿಹೆಚ್ಚು ವಿಜಯನಗರದಲ್ಲಿವೆ, ಮೆಗಾ ಡೈರಿ ವಿಜಯನಗರದಲ್ಲಿ ಸ್ಥಾಪನೆಯಾಗಲಿ ಅಂದರೆ ಹೇಗೆ ಸಾಧ್ಯ, ಬಳ್ಳಾರಿಯಲ್ಲೇ ಮೆಗಾ ಡೈರಿ ಮಂಜೂರಾಗಿದೆ, ಅದಕ್ಕೆ ಸ್ಥಳವು ನಿಗದಿಯಾಗಿದೆ, ಯಾವುದೇ ಕಾರಣಕ್ಕೂ ವಿಜಯನಗರಕ್ಕೆ ಸ್ಥಳಾಂತರವಾಗಲೂ ಬಿಡೋಲ್ಲ, ಅಗತ್ಯ ಬಿದ್ದರೆ ಅಲ್ಲಿಯೂ ಒಂದು ಸ್ಥಾಪನೆ ಮಾಡಲಿ.
ಈ ಹಿಂದೆ ಬಳ್ಳಾರಿಯಲ್ಲಿ 110ಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದವು, ಅಧಿಕಾರಿಗಳ ಅಸಹಕಾರ, ನಿರ್ಲಕ್ಷ್ಯ ಸೇರಿ ನಾನಾ ಕಾರಣಗಳಿಂದ ಕಡಿಮೆಯಾಗಿವೆ. ಸದ್ಯ ವಿಜಯನಗರದಲ್ಲಿ ಹೆಚ್ಚಿವೆ ಅಂದ್ರೆ, ಹಾಲು ಹಾಗೂ ಹಾಲಿನ ಉತ್ಪನ್ನಗಳು ಬಳ್ಳಾರಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ, ಹೋಲಿಕೆ ಮಾಡುವುದು ಸರಿಯಲ್ಲ. ಮೆಗಾ ಡೈರಿ ವಿಚಾರದಲ್ಲಿ ಭೀಮಾ ನಾಯ್ಕ್ ಹಟಕ್ಕೆ ಬಿದ್ದಂತೆ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆ ಸರಿಯಲ್ಲ, ಅಗತ್ಯ ಬಿದ್ದರೆ ಈ ಕುರಿತು ತನಿಖೆಯಾಗಲಿ ಎಂದು ಸವಾಲೆಸೆದರು.
ರಾಬಕೂವಿ ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ಹಾಲು ಉತ್ಪಾದಕರಿಗೆ ಪ್ರತಿ ಲೀ.1.50 ಪೈಸೆ ಕಡಿತ ಗೊಳಿಸಿದ್ದು, ಈ ಕ್ರಮ ಸರಿಯಲ್ಲ, ಇಲ್ಲಿವರೆಗೂ ನಮ್ಮ ರೈತರಿಗೆ 6 ರಿಂದ 7 ಕೋಟಿ ರೂ. ನೀಡುವುದು ಬಾಕಿಯಿದೆ, ಕೂಡಲೇ ಇದನ್ನು ಬಿಡುಗಡೆಗೊಳಿಸಿ ನಾನಾ ನೆಪ ಹೇಳದೇ ರೈತರ ಹಿತ ಕಾಪಾಡಬೇಕು. ಈ ಕುರಿತು ಜಿ.ಪಂ.ಕೆಡಿಪಿ ಸಭೆಯಲ್ಲಿ ಸಾಕಷ್ಟು ಬಾರಿ ಗಮನಸೆಳೆದಿರುವೆ, ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಕೂಡದು ಎಂದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಬಕೋವಿ ನಷ್ಟದಲ್ಲಿದೆ, ಸಂಪೂರ್ಣ ವ್ಯವಸ್ಥೆ ಹದಗೆಟ್ಟಿದೆ, ಈ ಹಿನ್ನೆಲೆ ಒಕ್ಕೂಟ ನಷ್ಟದಲ್ಲಿದೆ, ಇದು ರೈತರ ಸ್ವತ್ತು, ರಾಜಕಾರಣ ಮಾಡಬಾರದು, ಎಲ್ಲರೂ ಸೇರಿ ಅಭಿವೃದ್ದಿ ಪಡಿಸಬೇಕು, ಅದನ್ನು ಹಿಟ್ಟು ಪ್ರತಿಷ್ಠೆಗೆ ಇಳಿಯಬಾರದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಉಪಾಧ್ಯಕ್ಷ ವೀರಶೇಖರ ರೆಡ್ಡಿ, ನಗರ ಘಟಕದ ಅಧ್ಯಕ್ಷ ವೆಂಕಟೇಶ್ವರ, ರಾಬಾಕೊ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಪಾಲಿಕೆ ಸದಸ್ಯ ಅಶೋಕ್ ಕುಮಾರ್ ಇದ್ದರು.